Advertisement

ಬೆಳ್ತಂಗಡಿ: ತೆಪ್ಪ ಸಾಗುತ್ತಿದ್ದ ನದಿಗೆ ಈಗ ತೂಗು ಸೇತುವೆ 

10:47 AM Oct 31, 2018 | Team Udayavani |

ಬೆಳ್ತಂಗಡಿ: ಬೆಳ್ತಂಗಡಿ ನಗರದಿಂದ ಕೇವಲ 4 ಕಿ.ಮೀ. ದೂರದಲ್ಲಿದ್ದರೂ, ಆ ಪ್ರದೇಶದ ಮಂದಿ ನಗರಕ್ಕೆ ಬರಬೇಕಾದರೆ 15 ಕಿ.ಮೀ. ಸುತ್ತು ಬಳಸಿ ಬರಬೇಕಿತ್ತು. ಮಧ್ಯೆ ಸೋಮಾವತಿ ನದಿ ಇರುವ ಕಾರಣ ಇದು ಅನಿವಾರ್ಯವಾಗಿತ್ತು. ಈಗ ಸ್ಥಳೀಯ ವ್ಯಕ್ತಿಯೊಬ್ಬರು 20 ಲಕ್ಷ ರೂ. ವ್ಯಯಿಸಿ ತೂಗು ಸೇತುವೆಯೊಂದನ್ನು ನಿರ್ಮಿಸಿದ್ದಾರೆ. ಈ ತೂಗು ಸೇತುವೆಯಲ್ಲಿ ಸ್ಥಳೀಯರು ಕೂಡ ಸಂಚರಿಸುವುದಕ್ಕೆ ಅವಕಾಶ ನೀಡಿದ್ದಾರೆ.

Advertisement

ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದಿಂದ ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಪ್ರದೇಶವನ್ನು ಸಂಪರ್ಕಿಸಬೇಕಾದರೆ ಓಡದಕಡಪು ಪ್ರದೇಶದಲ್ಲಿ ಸೋಮಾವತಿ ನದಿ ದಾಟಿಯೇ ತೆರಳಬೇಕಿತ್ತು. ತೆಪ್ಪವೇ ಆಧಾರವಾಗಿತ್ತು. ಬೆಳ್ತಂಗಡಿ ನಗರವನ್ನು ಸಂಪರ್ಕಿಸಬೇಕಾದರೆ ಇವರು ನದಿ ದಾಟದೆ ಹೋಗಬೇಕಿದ್ದರೆ ನೆಕ್ಕರೆಕೋಡಿಯಿಂದ. ಮಾವಿನಕಟ್ಟೆಯಿಂದ . ಕೊಯ್ಯೂರು ಮೂಲಕ ಲಾೖಲಕ್ಕೆ ಬಂದು ಬಳಿಕ ಬೆಳ್ತಂಗಡಿಗೆ ಬರಬೇಕಿತ್ತು. ಹೀಗೆ ಬರುವುದಾದರೆ ಅವರು 15 ಕಿ.ಮೀ. ಸಾಗುವುದು ಅನಿವಾರ್ಯ.

ಹೀಗಾಗಿ ಸ್ಥಳೀಯರು ಪ್ರತಿವರ್ಷ ತೆಪ್ಪವೊಂದನ್ನು ಮಾಡಿ, ಅದರ ಮೂಲಕ ನದಿ ದಾಟುತ್ತಿದ್ದರು. ಆದರೆ ಪ್ರಸ್ತುತ ಬಿದಿರಿನ ಕೊರತೆಯಿಂದ ತೆಪ್ಪ ಮಾಡುವುದು ಕಷ್ಟವಾಗಿತ್ತು. ಈ ಬವಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮೆಸ್ಕಾಂನ ನಿವೃತ್ತ ಉದ್ಯೋಗಿ ಕೂಸಪ್ಪ ಗೌಡ ಅವರು ತೂಗು ಸೇತುವೆಯೊಂದನ್ನು ನಿರ್ಮಿಸಿದ್ದಾರೆ.

ಒಂದು ತಿಂಗಳಲ್ಲಿ ಸೇತುವೆ
ತೂಗು ಸೇತುವೆ ನಿರ್ಮಿಸಲು ನಿರ್ಧರಿಸಿದ್ದ ಕೂಸಪ್ಪ ಗೌಡ ಅವರಿಗೆ ನೆನಪಾದುದು ತೂಗು ಸೇತುವೆಗಳ ಸರದಾರ ಗಿರೀಶ್‌ ಭಾರಧ್ವಾಜ್‌. ನೇರವಾಗಿ ಅವರನ್ನು ಸಂಪರ್ಕಿಸಿ, ತೂಗು ಸೇತುವೆಯ ಕುರಿತು ಪ್ರಸ್ತಾಪಿಸಿದರು. ಬಳಿಕ ಗಿರೀಶ್‌ ಅವರ ಪುತ್ರ ಪತಂಜಲಿ ಭಾರದ್ವಾಜ್‌ ಅವರು ತಿಂಗಳೊಳಗೆ ಸೇತುವೆ ನಿರ್ಮಾಣದ ಕಾರ್ಯವನ್ನು ಮುಗಿಸಿದ್ದಾರೆ. ಆರಂಭದ 10 ದಿನಗಳಲ್ಲಿ ಪಿಲ್ಲರ್‌ ನಿರ್ಮಿಸಿ, ಬಳಿಕ ಮಧ್ಯದ ಸೇತುವೆ ಜೋಡಣೆ ಕಾರ್ಯ ನಡೆಸಲಾಗಿದೆ. ಒಟ್ಟಿನಲ್ಲಿ ತಿಂಗಳಲ್ಲಿ ಸೇತುವೆ ನಿರ್ಮಿಸಲಾಗಿದ್ದರೂ, ಸುಮಾರು 20 ದಿನಗಳ ಕ್ಯೂರಿಂಗ್‌ ನಡೆದಿದೆ. ಸೇತುವೆ ನಿರ್ಮಾಣದ ಬಳಿಕ ಸ್ಥಳೀಯ ಮೂರ್‍ನಾಲ್ಕು ಮನೆಯವರು ಅದೇ ಸೇತುವೆಯಲ್ಲಿ ಬೆಳ್ತಂಗಡಿ ನಗರನ್ನು ಸಂಪರ್ಕಿಸುತ್ತಿದ್ದಾರೆ.

ಕಾಲ್ನಡಿಗೆಗೆ ಮಾತ್ರ ಅವಕಾಶ
ಪ್ರಸ್ತುತ ಸೇತುವೆಯಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಿಲ್ಲ. ಕೇವಲ ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಮಾತ್ರ ಅವಕಾಶವಿದೆ. ಸೇತುವೆಯ ಒಂದು ಬದಿ ನೇರವಾಗಿ ತನ್ನ ತೋಟವನ್ನು ಸಂಪರ್ಕಿಸುವುದರಿಂದ ತೊಂದರೆಯಾಗಬಹುದು ಎಂಬ ದೃಷ್ಟಿಯಿಂದ ವಾಹನಕ್ಕೆ ಅವಕಾಶ ನೀಡಿಲ್ಲ ಎಂದು ಕೂಸಪ್ಪ ಗೌಡರು ಹೇಳುತ್ತಾರೆ.

Advertisement

ಪ್ರತಿವರ್ಷ ತೆಪ ನಿರ್ಮಾಣ
ಸ್ಥಳೀಯರು ಪ್ರತಿವರ್ಷ ಬಿದಿರು ಹಾಗೂ ಸಲಾಕೆಗಳನ್ನು ಬಳಸಿ ತೆಪ್ಪ ನಿರ್ಮಿಸುತ್ತಿದ್ದರು. ಬಿದಿರಿನ ತುಂಡುಗಳಿಗೆ ಅಡ್ಡಲಾಗಿ ಸಲಾಕೆ ಇಟ್ಟು ಕಬ್ಬಿಣದ ಸರಿಗೆಯ ಮೂಲಕ ಅದನ್ನು ಜೋಡಿಸಬೇಕಿತ್ತು. ಬಳಿಕ ಅದನ್ನು ರೋಪ್‌ ಹಾಗೂ ರಾಟೆಯ ಮೂಲಕ ಎಳೆದು ಒಂದು ಬದಿಯಿಂದ ಇನ್ನೊಂದು ಬದಿಗೆ ಸಾಗಬೇಕಿತ್ತು. ಆದರೆ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರಿದ್ದರೆ ತೆಪ್ಪವೂ ಮುಂದಕ್ಕೆ ಸಾಗುವುದು ಕಷ್ಟವಾಗುವ ಜತೆಗೆ ಅಪಾಯಕಾರಿಯೂ ಆಗಿದೆ. ಇನ್ನೊಂದೆಡೆ ಪ್ರಸ್ತುತ ದಿನಗಳಲ್ಲಿ ಬಿದಿರು ಕೂಡ ಅಪರೂಪವಾಗಿದ್ದು, ಬಿದಿರಿನ ಅಭಾವ ಸಾಕಷ್ಟಿತ್ತು. ಹೀಗಾಗಿ ಇಂತಹ ಸಮಸ್ಯೆಗಳಿಗೆ ತಿಲಾಂಜಲಿ ನೀಡುವ ದೃಷ್ಟಿಯಿಂದ ಕೂಸಪ್ಪ ಗೌಡರು ತೂಗು ಸೇತುವೆ ನಿರ್ಮಾಣದ ನಿರ್ಧಾರಕ್ಕೆ ಬಂದಿದ್ದರು.

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next