ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆವರೆಗೆ ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಖಂಡಿಗ ಶ್ರೀ ಸಂತಾನ ಗೋಪಾಲ ಕೃಷ್ಣ ದೇವಸ್ಥಾನದ ಆವರಣ ದ ತಡೆ ಗೋಡೆ ಸಂಪೂರ್ಣವಾಗಿ ಕುಸಿದು ಪಕ್ಕದ ಗದ್ದೆಗೆ ಬಿದ್ದಿದೆ. ಉಳಿದ ಭಾಗವು ಕುಸಿಯುವ ಹಂತದಲ್ಲಿದೆ.
ಜೀರ್ಣೋದ್ಧಾರದ ಅವಧಿಯಲ್ಲಿ ರಚಿಸಲಾದ ತಡೆಗೋಡೆ ಕುಸಿದಿರುವುದರಿಂದ ಪಕ್ಕದ ರಸ್ತೆಗೂ ಹಾನಿಯಾಗಿದೆ. ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಆಡಳಿತ ಮಂಡಳಿ ಹಾಗೂ ದೇವಸ್ಥಾನದ ಭಕ್ತರು ಆಗ್ರಹಿಸಿದ್ದಾರೆ.
ಇತ್ತ ಮಳೆಯಿಂದಾಗಿ ಧರ್ಮಸ್ಥಳ ಸಮೀಪ ಮರವೊಂದು ರಸ್ತೆಗೆ ಉರುಳು ಬಿದ್ದಿದ್ದು ತೆರವು ಕಾರ್ಯ ನಡೆದಿದೆ. ಧರ್ಮಸ್ಥಳ ಉಜಿರೆ ಮಾರ್ಗವಾಗಿ ಸಾಗುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ನೀರಚಿಲುಮೆ ಬಳಿ ರಸ್ತೆ ಬದಿ ಚರಂಡಿಗೆ ಇಳಿದ ಘಟನೆ ನಡೆದಿದೆ.
ರಾತ್ರಿಯಿಡಿ ಮಳೆ ಪ್ರಮಾಣ ಹೆಚ್ಚಾದ ಪರಿಣಾಮ ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಳಿಗೆ ತಹಶೀಲ್ದಾರ್ ಅವರ ಸೂಚನೆಯಂತೆ ರಜೆ ನೀಡಲಾಗಿದೆ.
ತಾಲೂಕಿನ ನೇತ್ರಾವತಿ, ಮೃತ್ಯುಂಜಯ, ಸೋಮಾವತಿ ನದಿ ನೀರಿನ ಮಟ್ಟವೂ ಏರಿಕೆಯಾಗಿದೆ.