ಬೆಳ್ತಂಗಡಿ: ಕರಂಬಾರು ಗ್ರಾಮದ ವ್ಯಕ್ತಿಯೊಬ್ಬರು ಸರಕಾರಿ ಜಮೀನನ್ನು ತನ್ನ ಜಮೀನೆಂದು ನಂಬಿಸಿ, ಭೂ ಪರಿವರ್ತನೆ ದಾಖಲೆ ತೋರಿಸಿ ಮನೆ ನಿರ್ಮಾಣದ ಬಳಿಕ ಹಣ ಪಾವತಿಸದೆ ಗುತ್ತಿಗೆದಾರರಿಗೆ ವಂಚಿಸಿದಲ್ಲದೆ ಹಣ ಕೇಳಲು ಹೋದಾಗ ಹಲ್ಲೆಗೆ ಯತ್ನಿಸಿದ ಬಗ್ಗೆ ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳ ತಾ| ನಲ್ಲೂರು ಗ್ರಾಮದ ಬರ್ನಂತಲ್ ಮನೆ ನಿವಾಸಿ ಗುತ್ತಿಗೆದಾರ ಕೃಷ್ಣ ಶೆಟ್ಟಿ (33) ವಂಚನೆಗೊಳಗಾದವರು. ಕರಂಬಾರು ಗ್ರಾಮದ ಊರ ಮನೆ ಸುರೇಶ್ ಪೂಜಾರಿ ಹಾಗೂ ಸಹೋದರ ಪ್ರಶಾಂತ್ ಪೂಜಾರಿ ಆರೋಪಿಗಳು.
ಆರೋಪಿ ಸುರೇಶ್ ಪೂಜಾರಿ ಅವರು ಸರ್ವೇ ನಂಬ್ರ 138-1 ರಲ್ಲಿ 40.41 ಎಕ್ರೆ ವಿಸ್ತೀರ್ಣ ಇರುವ ಸಮತಟ್ಟು ಮಾಡಿದ ಸರಕಾರಿ ಜಾಗವೊಂದನ್ನು ತನಗೆ ಸೇರಿದ್ದೆಂದು ಹೇಳಿ ಅದಕ್ಕೆ ಬೇಕಾದ ಭೂಪರಿವರ್ತನೆ ಮತ್ತು ಪಂಚಾಯತ್ ಲೈಸೆನ್ಸ್ ಇದೆ ಎಂದು ಕೆಲವು ದಾಖಲೆಗಳನ್ನು ತೋರಿಸಿ ಅಳದಂಗಡಿ ಕರ್ನಾಟಕ ಬ್ಯಾಂಕ್‌ನಲ್ಲಿ ಸಾಲ ಮಂಜೂರಾಗಿರುವುದಾಗಿ ಸುಳ್ಳು ಹೇಳಿದ್ದರು. ಈ ಜಾಗದಲ್ಲಿ ಒಂದು ಮನೆಯನ್ನು ಕಟ್ಟಿಕೊಡಬೇಕು ಎಂದು ಗುತ್ತಿಗೆದಾರ ಕೃಷ್ಣ ಶೆಟ್ಟಿಯಲ್ಲಿ ತಿಳಿಸಿದಂತೆ ಒಪ್ಪಂದ ಮಾಡಿಕೊಂಡ ಪ್ರಕಾರ ಮನೆ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಸಮಯ ಗುತ್ತಿಗೆದಾರರಲ್ಲಿ ಮಾಲಕ ಸುರೇಶ್ ಪೂಜಾರಿ ಬ್ಯಾಂಕಿನಿಂದ ಸಾಲ ಮಂಜೂರಾಗಬೇಕಾಗಿದೆ ಎಂದು ಹೇಳಿ ಕಾಮಗಾರಿ ಕೆಲಸದ ಹಣವನ್ನು ಬಾಕಿ ಇಟ್ಟಿದ್ದರು. ಈ ಬಗ್ಗೆ ಕೃಷ್ಣ ಶೆಟ್ಟಿ ಅಳದಂಗಡಿ ಕರ್ನಾಟಕ ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಸುರೇಶ್ ಪೂಜಾರಿಯವರಿಗೆ ಯಾವುದೇ ಮನೆಕಟ್ಟುವ ಸಾಲವನ್ನು ನೀಡಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸರಕಾರಿ ಜಾಗದ ಸರ್ವೇ ನಂಬ್ರ 138-1ರಲ್ಲಿ 40.41 ಎಕ್ರೆ ಜಮೀನಿನಲ್ಲಿ 0.9 ಸೆಂಟ್ಸ್ ಜಾಗದಲ್ಲಿ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಮನೆಯನ್ನು ಕಟ್ಟಿಸಿದ್ದು, ಅದನ್ನು ಬೆಳ್ತಂಗಡಿ ತಹಶೀಲ್ದಾರರವರಿಗೆ ಸುಳ್ಳು ದಾಖಲೆಗಳ ಮುಖಾಂತರ ಕೂಲಿ ಕೆಲಸಗಾರ ವಾರ್ಷಿಕ ಆದಾಯ 45,000 ರೂ. ಎಂದು 2015ರಲ್ಲಿ ಕಟ್ಟಿರುತ್ತೇನೆ ಎಂದು ಅರ್ಜಿಯನ್ನು ನೀಡಿರುವುದಲ್ಲದೇ ಗುತ್ತಿಗೆದಾರರಿಗೆ ಒಪ್ಪಂದದಲ್ಲಿ ಮೋಸ ಮಾಡಿದ್ದರು. ಈ ಬಗ್ಗೆ ಇಲಾಖೆಗೆ ದೂರು ನೀಡಿ¨ ಆರೋಪಿಯ ಸಹೋದರ ಪ್ರಶಾಂತ ಪೂಜಾರಿ ವಾಟ್ಸ್ ಆ್ಯಪ್ ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಕೃಷ್ಣ ಶೆಟ್ಟಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.