ಬೆಳ್ತಂಗಡಿ: ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ಐಸಿಎಆರ್) ಮಂಗಳವಾರ ಹೊಸದಿಲ್ಲಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕಿಲ್ಲೂರಿನ ಅಮೈ ಬಿ.ಕೆ. ದೇವರಾವ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ “ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ-2020-21′ ಪುರಸ್ಕಾರ ಸ್ವೀಕರಿಸಿದ್ದಾರೆ.
ರೈತರ ಹಕ್ಕುಗಳ ಕುರಿತ ಮೊದಲ ಜಾಗತಿಕ ವಿಚಾರ ಸಂಕಿರಣ (First Global Symposium on Farmers’ Rights)ದಿಲ್ಲಿಯಲ್ಲಿ ಆರಂಭ ಗೊಂಡಿದ್ದು ಸೆ. 15ರ ವರೆಗೆ ನಡೆಯಲಿದೆ.
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ರಾಷ್ಟ್ರಪತಿ ಗಳು ಕೃಷಿಯಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ದೇವ ರಾವ್ ರಾಜ್ಯದ 117 ಭತ್ತದ ತಳಿಗಳನ್ನು ಅಭಿವೃದ್ಧಿ ಪಡಿಸಿ ಸಂರಕ್ಷಿಸಿದ ಹಿನ್ನೆಲೆಯಲ್ಲಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಮಲ್ಲಿಕಾರ್ಜುನ್ ಅವರ ಸೂಚನೆಯಂತೆ ಕೆಳದಿ ಶಿವಪ್ಪ ನಾಯಕ ಕೃಷಿ ವಿಶ್ವವಿದ್ಯಾನಿಲಯದ ಶಿಫಾರಸಿನ ಮೇರೆಗೆ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದೇಶದ 10 ಮಂದಿ, ರಾಜ್ಯದ ಇಬ್ಬರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು 1.50 ಲಕ್ಷ ರೂ. ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡಿದೆ.
ಈ ವೇಳೆ ಬಿ.ಕೆ. ದೇವರಾವ್ ಅವರ ಪುತ್ರ ಬಿ.ಕೆ. ಪರಮೇಶ್ವರ್ ರಾವ್ ಜತೆಗಿದ್ದರು.ದೇವರಾವ್ ತನ್ನ 5 ಎಕರೆ ಗದ್ದೆಯಲ್ಲಿ ಸಾವಯವ ಕೃಷಿ ಪದ್ಧತಿಯೊಂದಿಗೆ 175ಕ್ಕೂ ಅಧಿಕ ಭತ್ತದ ತಳಿಗಳನ್ನು ಬೆಳೆದಿದ್ದಾರೆ. ಒಂದೇ ಗದ್ದೆಯಲ್ಲಿ ಅನೇಕ ಬಗೆಯ ತಳಿಗಳನ್ನು ನಾಟಿ ಮಾಡುವ ಅವರು, ಭತ್ತವನ್ನು ನೋಡಿ ಯಾವ ತಳಿ ಎಂದು ಗುರುತಿಸುವ ಸಾಮರ್ಥ್ಯ ಹೊಂದಿದ್ದಾರೆ. 2019ರಲ್ಲಿ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ತಳಿ ತಪಸ್ವಿ ಬಿರುದು, ರಾಷ್ಟ್ರಮಟ್ಟದ ಪ್ರತಿಷ್ಠಿತ ಸೃಷ್ಟಿ ಸಮ್ಮಾನ್ ಸಹಿತ ನಾನಾ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.
ಪ್ರಶಸ್ತಿ ಸ್ವೀಕರಿಸಿ ಹರ್ಷ ವ್ಯಕ್ತಪಡಿಸಿರುವ ಬಿ.ಕೆ. ದೇವರಾವ್ ಉದಯವಾಣಿಗೆ ಪ್ರತಿಕ್ರಿಯಿಸಿ, ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿರುವುದು ಅತ್ಯಂತ ಸಂತೋಷ ತಂದಿದೆ. ಭವಿಷ್ಯದಲ್ಲಿ ಭತ್ತದ ಕೃಷಿ ನಶಿಸದೆ, ಸಮಗ್ರವಾಗಿ
ಅಭಿವೃದ್ಧಿ ಹೊಂದುವಲ್ಲಿ ಯೋಜಿತ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.