ಬೆಳ್ತಂಗಡಿ: ಇಲ್ಲಿನ ಸಂತೆಕಟ್ಟೆ ಬಳಿಯಿರುವ ಅರಣ್ಯ ಇಲಾಖೆಯ ಗೋದಾಮಿನಲ್ಲಿ ದಾಸ್ತಾನಿರಿಸಲಾಗಿದ್ದ ಸುಮಾರು 14 ಲಕ್ಷ ರೂ. ಮೌಲ್ಯದ 350 ಕೆ.ಜಿ. ಶ್ರೀಗಂಧದ ಕೊರಡು ಜು.13ರಂದು ಕಳವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಗೊದಾಮು, ಅರಣ್ಯ ಇಲಾಖೆ ಕಚೇರಿಗೆ ಸಿಸಿ ಕೆಮರಾ ಅಳವಡಿಸಿದೆ.
ಅರಣ್ಯ ಇಲಾಖೆ ಯವರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದು ಗೋದಾ ಮಿನಲ್ಲಿದ್ದ ಶ್ರೀಗಂಧದ ಕೊರಡುಗಳು ಕಾಣೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಆದರೆ ಈ ವರೆಗೂ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಈ ಹಿಂದೆ 1997ರಲ್ಲೂ ಅರಿವಿಗೆ ಬಾರದಂತೆ ಇಲ್ಲಿ ಕಳವಾಗಿತ್ತು.
ಕಳ್ಳರು ಬೀಗ ತುಂಡು ಮಾಡಿ ಒಳಗೆ ಪ್ರವೇಶಿಸಿದ್ದು, ಬಳಿಕ ಗಮ್ಮಿನ ಮೂಲಕ ಅಂಟಿಸಿದ್ದಾರೆ. ಜತೆಗೆ ಬೀಗ ಮುರಿದಿರುವ ಭಾಗವು ತುಕ್ಕು ಹಿಡಿದಿರುವ ಜತೆಗೆ ಕೊರಡುಗಳಿದ್ದ ಪ್ರದೇಶದಲ್ಲಿ ಜೇಡರ ಬಲೆ ಇದ್ದು, ಘಟನೆ ಒಂದು ವಾರದ ಮುಂಚೆ ನಡೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದರು.
ಗೋದಾಮಿನಲ್ಲಿ ಸುಮಾರು 400 ಕೆ.ಜಿ.ಯಷ್ಟು ಶ್ರೀಗಂಧ ಕೊರಡುಗಳ ದಾಸ್ತಾನಿದ್ದು, ಅದರಲ್ಲಿ 50 ಕೆ.ಜಿ.ಯಷ್ಟು ಅಲ್ಲೇ ಇದೆ. ಈ ಹಿನ್ನೆಲೆಯಲ್ಲಿ ಕಡೆಗೂ ಇಲಾಖೆ ಸಿಸಿ ಕೆಮರಾ ಆಳವಡಿಸುವ ಮೂಲಕ ಎಚ್ಚೆತ್ತುಕೊಂಡಿದೆ.
9 ಸಿಸಿ ಕೆಮರಾ
ಆರೋಪಿಗಳ ಪತ್ತೆಗೆ ಪೊಲೀಸ್ ಇಲಾಖೆ ವ್ಯಾಪಕವಾಗಿ ತನಿಖೆ ಕೈಗೊಂಡಿದೆ. ಈ ನಡುವೆ ಗೋದಾಮಿಗೆ 4, ಅರಣ್ಯ ಇಲಾಖೆ ಕಚೇರಿಗೆ 5 ಸಹಿತ ಒಟ್ಟು 9 ಸಿಸಿ ಕೆಮರಾ ಅಳವಡಿಸಲಾಗಿದೆ.
– ಸುಬ್ಬಯ್ಯ ನಾಯ್ಕ, ವಲಯ ಅರಣ್ಯಾಧಿಕಾರಿ, ಬೆಳ್ತಂಗಡಿ