Advertisement

Belthangady: ಅಕ್ರಮ ಕಲ್ಲು ಗಣಿಗಾರಿಕೆ ಆರೋಪ; ಇಬ್ಬರ ವಿರುದ್ಧ ಪ್ರಕರಣ, ಓರ್ವನ ಬಂಧನ

12:10 AM May 20, 2024 | Team Udayavani |

ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಮೂಡಲದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಬೆಳ್ತಂಗಡಿ ತಹಶೀಲ್ದಾರ್‌ ಹಾಗೂ ಪೊಲೀಸರು ಮೇ 18ರಂದು ದಾಳಿ ನಡೆಸಿ ಇಬ್ಬರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧಿಸಲಾಗಿದೆ.

Advertisement

ಆರೋಪಿಗಳಾದ ಪ್ರಮೋದ್‌ ಉಜಿರೆ ಹಾಗೂ ಶಶಿರಾಜ್‌ ಶೆಟ್ಟಿ (35) ವಿರುದ್ಧ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಈ ಪೈಕಿ ಶಶಿರಾಜ್‌ ಶೆಟ್ಟಿ ಅವರನ್ನು ಬಂಧಿಸಲಾಗಿದೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮತ್ತೋರ್ವ ಪರಾರಿಯಾಗಿದ್ದಾರೆ.

ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ ಬೆಳ್ತಂಗಡಿ ತಹಶೀಲ್ದಾರರಾದ ಪೃಥ್ವಿ ಸಾನಿಕಂ ಅವರು ಸಿಬಂದಿ ಹಾಗೂ ಪೊಲೀಸ್‌ ಉಪ ನಿರೀಕ್ಷಕರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದರು. ದಾಳಿ ವೇಳೆ ಸ್ಥಳದಲ್ಲಿ ಕಲ್ಲು, ಹಿಟಾಚಿ-1, ಟ್ರ್ಯಾಕ್ಟರ್‌-1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿದೆ ಎನ್ನಲಾಗಿದೆ.

ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಿಸಿದಾಗ ಪ್ರಮೋದ್‌ ಉಜಿರೆ ಹಾಗೂ ಶಶಿರಾಜ್‌ ಅವರು ಗಣಿಗಾರಿಕೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಸ್ಫೋಟಕ ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಶಾಸಕರ ವಿರುದ್ಧ ದೂರು ದಾಖಲು
ಬಂಧಿತ ಪ್ರಮುಖ ಆರೋಪಿ ಹಾಗೂ ಬೆಳ್ತಂಗಡಿ ಠಾಣೆ ವ್ಯಾಪ್ತಿಯ ರೌಡಿಶೀಟರ್‌ ಆಗಿರುವ ಶಶಿರಾಜ್‌ ಪರ ಶಾಸಕ ಹರೀಶ್‌ ಪೂಂಜ ಹಾಗೂ ಇತರ ಕೆಲವರು ಆರೋಪಿಯನ್ನು ಕಾನೂನು ಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವಾಚ್ಯವಾಗಿ ಬೈದು ಬೆದರಿಸಿರುತ್ತಾರೆ. ಅವರು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್‌ ಇಲಾಖೆ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಠಾಣೆಯಲ್ಲಿ ಮಧ್ಯರಾತ್ರಿ ಶಾಸಕ ಪೂಂಜ ಪ್ರತಿಭಟನೆ
ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತ ಶಶಿರಾಜ್‌ ಶೆಟ್ಟಿಯನ್ನು ಪೊಲೀಸರು ವಿನಾಕಾರಣ ಬಂಧಿಸಿದ್ದಾರೆ. ಪೊಲೀಸರ ಕಾಂಗ್ರೆಸ್‌ ಏಜಂಟರಂತೆ ವರ್ತಿಸಿದ್ದಾರೆ. ಯಾವುದೇ ದಾಖಲೆಯಿಲ್ಲದೆ ಪತ್ನಿ ಮಕ್ಕಳು, ಮನೆಮಂದಿ ಎದುರೇ ರಾತೋರಾತ್ರಿ ಬಂಧಿಸಿ ದರ್ಪ ತೊರಲಾಗಿದೆ. ಇದು ವ್ಯವಸ್ಥಿತ ಷಡ್ಯಂತ್ರ ಎಂದು ಆರೋಪಿಸಿ ಶಾಸಕ ಹರೀಶ್‌ ಪೂಂಜ ಅವರು ಮಧ್ಯರಾತ್ರಿ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದರು. ಬೆಳಗ್ಗೆ 5 ಗಂಟೆ ವರೆಗೂ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದ್ದಲ್ಲದೆ, ಪೊಲೀಸರ ಜತೆ ವಾಗ್ವಾದ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next