ಬೆಳ್ತಂಗಡಿ: ತನ್ನನ್ನು ಹಾಗೂ ತನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳದೆ ಅವಾಚ್ಯ ಶಬ್ದಗಳಿಂದ ಬೈದು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿ, ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ಬೆಳಾಲು ಗ್ರಾಮದ ಕೋರ್ದೊಟ್ಟು ನಿವಾಸಿ ಹರ್ಷಿತಾ ಅವರು ನೀಡಿದ ದೂರಿನಂತೆ ಆಕೆಯ ಪತಿ ಸೇರಿದಂತೆ ಆರು ಮಂದಿಯ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರ್ಷಿತಾ ಅ. 17ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬೆಳಾಲು ಗ್ರಾಮದ ಕೋರ್ದೊಟ್ಟು ನಿವಾಸಿಯಾಗಿರುವ ತನ್ನನ್ನು 2021 ಜ. 8ರಂದು ಕಡಬ ತಾಲೂಕು ರಾಮಕುಂಜ ಗ್ರಾಮದ ಅಂಬುಡೇಲು ಮನೆ ಲಕ್ಷ್ಮೀಶ ಬಿ.ಎಂ.ಗೆ ವಿವಾಹ ಮಾಡಿಕೊಟ್ಟಿದ್ದು, 1 ವರ್ಷದ ಒಂದು ಗಂಡು ಮಗುವಿದೆ.
ವಿವಾಹದ ಒಂದು ತಿಂಗಳ ಕಾಲ ಗಂಡ ಚೆನ್ನಾಗಿದ್ದು, ಅನಂತರ ಗಂಡ ಹಾಗೂ ಗಂಡನ ಮನೆಯವರಾದ ಮಾವ ಚೆನ್ನಪ್ಪ ಗೌಡ, ಅತ್ತೆ ಗುಲಾಬಿ, ಬಾವ ರತ್ನಾಕರ, ನಾದಿನಿ ಸರೋಜಿನಿ, ಇನ್ನೋರ್ವ ನಾದಿನಿ ಸುಧಾ ಅವರು 2021ರ ಎ. 6ರಿಂದ 2022ರ ಸೆ. 19ರ ವರೆಗೆ ಉಜಿರೆ ಗ್ರಾಮದ ಉಜಿರೆ ಮತ್ತು ಕಡಬ ತಾಲೂಕು ರಾಮಕುಂಜ ಗ್ರಾಮದ ಅಂಬುಡೇಲು ಎಂಬಲ್ಲಿ ವಿನಾ ಕಾರಣ ನನ್ನನ್ನು ಹಾಗೂ ನನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳದೆ ಅವಾಚ್ಯಗಳಿಂದ ಬೈದು ಮಾನಸಿಕ ಹಿಂಸೆ ಹಾಗೂ ಹಲ್ಲೆ ನಡೆಸಿ ದೈಹಿಕ ಹಿಂಸೆ ನೀಡಿದ್ದಾರೆ. ಮಾತ್ರವಲ್ಲದೆ 10 ಲಕ್ಷ ರೂ. ಹಣವನ್ನು ವರದಕ್ಷಿಣೆಯಾಗಿ ತಂದು ಕೊಡುವಂತೆ ಬೇಡಿಕೆ ಇಟ್ಟು ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೂರಿನ ವಿಚಾರವನ್ನು, ಕುಟುಂಬದ ಹಿರಿಯರಲ್ಲಿ ಪಂಚಾಯತಿ ಮಾಡಿ ಸಾಂತ್ವನ ಕೇಂದ್ರ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರಲ್ಲಿ ದೂರು ನೀಡಿ ಸಮಸ್ಯೆ ಬಗೆಹರಿಯಬಹುದೆಂಬ ಆಶಾಭಾವನೆಯಿಂದ ಈ ದೂರನ್ನು ನೀಡಲು ವಿಳಂಬವಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.