Advertisement

Belthangady: ದಿನಕ್ಕೆ 3 ಟನ್‌ ತ್ಯಾಜ್ಯ ನಿರ್ವಹಣೆ ಸವಾಲು

06:04 PM Oct 06, 2023 | Team Udayavani |

ಬೆಳ್ತಂಗಡಿ: ದಿನೇ ದಿನೆ ಹೆಚ್ಚುತ್ತಿರುವ ಜನಸಂಖ್ಯೆ ಆಧಾರದಲ್ಲಿ ಪೌರಕಾರ್ಮಿ ಕರ ಜವಾಬ್ದಾರಿಯೂ ಹೆಚ್ಚುತ್ತಿದೆ. ಇದಕ್ಕಾಗಿ
ಕಳೆದ ಸರಕಾರವು ನೇರ ಪಾವತಿಯಲ್ಲಿದ್ದ ಪೌರ ಕಾರ್ಮಿಕರನ್ನು ನೇರನೇಮಕಾತಿಗೊಳಿಸಿದೆ. ಬೆಳ್ತಂಗಡಿ ಪ.ಪಂ.ನಲ್ಲಿ ಕಳೆದ 10 ವರ್ಷಗಳಿಂದ ನೇರ ಪಾವತಿಯಡಿ ಸೇವೆ ಸಲ್ಲಿಸುತ್ತಿದ್ದ 8 ಮಂದಿ ಪೌರಕಾರ್ಮಿಕರನ್ನು ಈಗ ನೇರ ನೇಮಕಾತಿ ಮಾಡಿಕೊಂಡಿದೆ.

Advertisement

ಪಟ್ಟಣದಲ್ಲಿ 2011ರ ಜನಗಣತಿಯಂತೆ 7,746 ಜನಸಂಖ್ಯೆಯಿದ್ದು, ಆದರೆ ಸದ್ಯ ಅಂದಾಜು ಪ್ರಕಾರ 8,250 ಜನಸಂಖ್ಯೆಯಿದೆ. ನಿಯಮಾನುಸಾರ ಪ್ರತೀ 700 ಜನಸಂಖ್ಯೆಗೆ ಓರ್ವ ಪೌರಕಾರ್ಮಿಕನ ಅಗತ್ಯವಿದೆ. ಆದರೆ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ 11 ವಾರ್ಡುಗಳಿಗೆ ಸಂಬಂಧಿಸಿ 15 ಖಾಯಂ ನೌಕರರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ 8 ಮಂದಿಯನ್ನು ನೇರ ನೇಮಕಾತಿಗೊಳಿಸಿದ್ದು, ಓರ್ವ ನೇರ ಪಾವತಿಯಡಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ 2 ಹುದ್ದೆಗಳು ಖಾಲಿ ಇವೆ.

ತ್ಯಾಜ್ಯ ಸಂಗ್ರಹ
ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯೊಂದ ರಲ್ಲೇ ಪ್ರತೀ ದಿನ 3 ಟನ್‌ ಕಸ ಸಂಗ್ರಹಿಸಲಾಗುತ್ತಿದೆ. ಅವುಗಳ ಪೈಕಿ 1.65 ಟನ್‌ ಹಸಿ ಕಸವಾದರೆ, 1.35 ಒಣ ಕಸ ಸಂಗ್ರಹಿಸಲಾಗುತ್ತಿದೆ. ಹಸಿ ಕಸದಿಂದ ಗೊಬ್ಬರ ಉತ್ಪಾದಿಸಿ ಮಾರಾಟ ಮಾಡಿದರೆ, ಒಣಕಸ ಮರುಬಳಕೆಗೆ ಕಳುಹಿಸಿ ಆದಾಯ ಪಡೆಯಲಾಗುತ್ತಿದೆ. ಈವರೆಗೆ 1,000 ಟನ್‌ ಗೊಬ್ಬರ ಉತ್ಪಾದಿಸಿ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಕೆ.ಜಿ. ಗೆ10 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.  ಒಣಕಸ ಮರುಬಳಕೆಯಿಂದ ಪ.ಪಂ.ಗೆ ಮಾಸಿಕ 15,000 ರೂ. ಆದಾಯ ಬರುತ್ತಿರುವುದು ಸಾಧನೆಯಾಗಿದೆ.

ಶುಕ್ರವಾರ ಮಾತ್ರ ಒಣ ಕಸ
ತ್ಯಾಜ್ಯ ನಿರ್ವಹಣೆ ಪ್ರತಿದಿನ ಸವಾಲಾಗಿ ಪರಿಣಮಿಸಿರುವುದರಿಂದ ಹಸಿ ಕಸ ಮತ್ತು ಒಣ ಕಸ ನೀಡಲು ಪಟ್ಟಣ ವ್ಯಾಪ್ತಿಯ ಮನೆ ಮನೆಗೆ ಒಟ್ಟು 3,900 ರಷ್ಟು ಪ್ಲಾಸ್ಟಿಕ್‌ ಬಕೆಟ್‌ಗಳನ್ನು ವಿತರಿಸಲಾಗಿದೆ. ಈಗಾಗಲೆ 11 ವಾರ್ಡ್‌ಗೆ 3 ಕಸ ಸಂಗ್ರಹ ವಾಹನ ನಿಯೋಜಿಸಲಾಗಿದ್ದು, ಪ.ಪಂ. ನೀಡಿದ ಪ್ಲಾಸ್ಟಿಕ್‌ ಡಬ್ಬದಲ್ಲಿ ನೀಡಿದರಷ್ಟೆ ಪೌರ ಕಾರ್ಮಿಕರು ಕಸ ಸಂಗ್ರಹಿಸುತ್ತಾರೆ. ಜತೆಗೆ ವಾರದಲ್ಲಿ ಒಂದು ದಿನ ಅಂದರೆ ಪ್ರತೀ ಶುಕ್ರವಾರ ಮಾತ್ರ ಒಣ ಕಸ. ಉಳಿದ ದಿನ ಹಸಿ ಕಸ ನೀಡಬೇಕೆಂದು ನಿರ್ಣಯಕ್ಕೆ ಪ.ಪಂ. ಬಂದಿದೆ. ಈ ಮೂಲಕ ಸ್ವಚ್ಛ ಭಾರತ ಸಂಕಲ್ಪದೊಂದಿಗೆ ಸ್ವತ್ಛ ಪರಿಸರ ನಮ್ಮದಾಗಿಸೋಣ ಎಂಬ ಸಂದೇಶ ಸಾರಿದೆ.

ಪೌರ ಕಾರ್ಮಿಕರಿಗೆ ಗೃಹಭಾಗ್ಯ
ಕರ್ತವ್ಯದಲ್ಲಿರುವ ಪೌರಕಾರ್ಮಿಕರಿಗಾಗಿ ಅಮೃತ ನಗರೋತ್ಥಾನ ಯೋಜನೆಯಡಿ ಹಂತ 4 ರಲ್ಲಿ ಹುಣ್ಸೆಕಟ್ಟೆಯಲ್ಲಿ ಅಂದಾಜು
20.49 ಲಕ್ಷ ರೂ. ವೆಚ್ಚದಲ್ಲಿ ಇಬ್ಬರಿಗೆ ಪ್ರತ್ಯೇಕ ವಸತಿಗೃಹವು ನಿರ್ಮಾಣ ಹಂತದಲ್ಲಿದೆ. ಎರಡು ಕೊಠಡಿ, ಅಡುಗೆ ಕೋಣೆ, ಹಾಲ್‌ ಹೊಂದಿರುವ ರೂಮ್‌ ಹೊಂದಿದೆ. ಕೆಲವೇ ತಿಂಗಳಲ್ಲಿ ಉದ್ಘಾಟನೆಗೆ ಸಜ್ಜಾಗಿದೆ. ಉಳಿದ ಪೌರಕಾರ್ಮಿಕರಿಗೆ ಸ್ವಂತ ಮನೆಯಿದ್ದು, ಆದರೂ ಸರಕಾರದ ಗೃಹಭಾಗ್ಯ ಯೋಜನೆಯಡಿ ನಿವೇಶನ ಹಾಗೂ ಮನೆ ನಿರ್ಮಿಸಲು ಪ.ಪಂ. ಕಾರ್ಯೋನ್ಮುಖವಾಗಿದೆ.

Advertisement

ಮತ್ತೊಂದೆಡೆ ಕೊಯ್ಯೂರಿನಲ್ಲಿರುವ ಘನತ್ಯಾಜ್ಯ ಘಟಕದಲ್ಲೂ ನೂತನ ವಿಶ್ರಾಂತಿ ಕೊಠಡಿ ನಿರ್ಮಿಸಲು ಚಿಂತಿಸಿದೆ. ಈ ಮೂಲಕ ಮನೆ ಮನೆ ನಮ್ಮ ತ್ಯಾಜ್ಯಗಳನ್ನು ಸಂಗ್ರಹಿಸಿ ಪರಿಸರ ಸ್ವತ್ಛವಾಗಿ ಕಾಪಿಡುವ ಪೌರಕಾರ್ಮಿಕರ ಜೀವನಕ್ಕೂ ಒಂದು
ಭದ್ರತೆ ದೊರೆತಂತಾಗಲಿದೆ.

ತ್ಯಾಜ್ಯ ನಿರ್ವಹಣೆ ಸಣ್ಣ ಪಟ್ಟಣಕ್ಕೂ ಸವಾಲಾಗಿದೆ. ಅದಕ್ಕಾಗಿ ಹಸಿ ಕಸ, ಒಣ ಕಸ ವಿಂಗಡಿಸಲೇಬೇಕು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನದಂತೆ ಈಗಾಗಲೆ ಧರ್ಮಸ್ಥಳ ಗ್ರಾ.ಪಂ.ನಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ಮುಕ್ತ ನಗರ ಎಂದು ಘೋಷಿಸಿದೆ. ಮುಂದೆ ಬೆಳ್ತಂಗಡಿ ಪಟ್ಟಣದಲ್ಲೂ ಜಾರಿಯಾಗಲಿದೆ. ಜನರು ನಿಷೇಧಿತ ಪ್ಲಾಸ್ಟಿಕ್‌ ಬಳಸದೆ ಆರೋಗ್ಯಕರ ಸ್ವಚ್ಛ ಬೆಳ್ತಂಗಡಿಗಾಗಿ ಸಹಕರಿಸಿ.
ರಾಜೇಶ್‌ ಕೆ., ಮುಖ್ಯಾಧಿಕಾರಿ, ಪ.ಪಂ., ಬೆಳ್ತಂಗಡಿ

*ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next