Advertisement
ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯ, ಯಕ್ಷಗಾನ ಸೇರಿದಂತೆ ದೇಶದ ವಿವಿಧ ಬುಡಕಟ್ಟು ಜನಪದ ಕಲಾಪ್ರಕಾರಗಳಾದ ಕೊಡವ ಸುಗ್ಗಿ ಕುಣಿತ ಮತ್ತು ಹುತ್ತರಿ ಕೋಲಾಟ, ರಾಜಸ್ಥಾನದ ಬಂಜಾರ ನೃತ್ಯ, ಪಂಜಾಬಿನ ಬಾಂಗ್ಡಾ, ಮಣಿಪುರಿ ಸ್ಟೀಕ್ ಡ್ಯಾನ್ಸ್, ಒರಿಸ್ಸಾದ ಗೋಟಿಪೊವಾ ಸೇರಿದಂತೆ ಹಲವಾರು ತ್ಯತ್ಯವೈವಿಧ್ಯಗಳನ್ನು ಪ್ರದರ್ಶಿಸಲಾಯಿತು.ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಮೋಹನ್ ಆಳ್ವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವು ಸಂಸ್ಕೃತ ಸಿರಿ ತಂಡದ ಗಾಯನ ಗೀತೆಯ ಮೂಲಕ ಆರಂಭಗೊಂಡಿತು. ವಿದ್ಯಾಶ್ರೀ ಮತ್ತು ಬಳಗದ ಜಾನಪದ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆಯಿತು. ದೇವಿ ಮಹಾತ್ಮೆಯ ಭರತನಾಟ್ಯವು ದೈವಿಕತೆ ಕಳೆ ತಂದೊಡ್ಡಿತು. ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘ, ಹೂಟಗಳ್ಳಿ ಮೈಸೂರು ತಂಡದ ಪುರುಷರ ಕೋಲಾಟವು ಕೊಡಗಿನ ಹುತ್ತರಿ ಹಬ್ಬದ ಆಚರಣೆಯ ಪರಿಯನ್ನು ನೃತ್ಯರೂಪಕವಾಗಿ ಪ್ರದರ್ಶಿಸಿದರು. ಜತೆಗೆ ಕೊಡಗಿನ ಮಹಿಳೆಯರ ಅರೆ ಭಾಷೆಯ ಸುಗ್ಗಿ ಕುಣಿತದ ಸಂಭ್ರಮ, ಉತ್ತರ ಕರ್ನಾಟಕದ ಜನಪದ ಸಾಹಿತ್ಯವನ್ನು ಬಿಂಬಿಸುವ ಹಾಡುಗಳನ್ನು ಬಾಗಲಕೋಟೆಯ ಪುಟ್ಟರಾಜ ಗಾಯನ ತಂಡದಿಂದ ನಡೆಸಿಕೊಡಲಾಯಿತು. ಭಿಡೆ ಸಹೋದರಿಯರು ಮತ್ತು ತಂಡದಿಂದ ಕುಮಾರವ್ಯಾಸ ಭಾರತ ಕೃತಿಯಿಂದ ಆಯ್ದ ಮಹಾಭಾರತದ ಕೀಚಕವಧೆ ಪ್ರಸಂಗವನ್ನು ನೃತ್ಯರೂಪಕದಲ್ಲಿ ಪ್ರದರ್ಶಿಸಲಾಯಿತು. ಗಮನ ಸೆಳೆದ ಆಳ್ವಾಸ್ ಸಾಂಸ್ಕೃತಿಕ ವೈಭವ
ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡವು ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶದ ಮೂಲಕ ಭಾರತದ ಎಲ್ಲ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವನ್ನು ವರ್ಣಮಯವಾಗಿ ಪ್ರದರ್ಶಿಸಿತು. ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನವು ವಿಶೇಷತೆಯಿಂದ ಕೂಡಿದ್ದು, ರಾಜಸ್ಥಾನ ಮೂಲದ ಲಂಬಾಣಿ ಜನಾಂಗದ ಬಂಜಾರ ನೃತ್ಯ, ಮಣಿಪುರದ ಪ್ರಸಿದ್ಧ ಸ್ಟಿಕ್ ಡ್ಯಾನ್ಸ್ ನೃತ್ಯ ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಮಧ್ಯಪ್ರದೇಶದಲ್ಲಿ ಜನಜನಿತವಾದ ಮಲ್ಲಕಂಬದ ಪ್ರದರ್ಶನ, ಪಂಜಾಬಿನಲ್ಲಿ ಪ್ರಸಿದ್ಧವಾದ “ಬಾಂಗ್ಡಾ’ ನೃತ್ಯ ಒರಿಸ್ಸಾದ ಪುರಿ ಜಗನ್ನಾಥನ ಆರಾಧನೆಯ ಗೋಟಿಪುವಾ ನೃತ್ಯ, ಪಶ್ಚಿಮ ಬಂಗಾಲದ ಪುರುಲಿಯಾ ಚಾವು ನೃತ್ಯ ಸಾಹಿತ್ಯಾಸಕ್ತರಿಗೆ ರಸದೌದಣ ನೀಡಿತು.