ಬೆಳ್ತಂಗಡಿ: ಚಿತ್ರದುರ್ಗ ಮೂಲದ ಬಾಲಕನೋರ್ವ ರಜೆಯ ನಿಮಿತ್ತ ತನ್ನ ದೊಡ್ಡಮ್ಮನ ಮನೆಗೆ ಬಂದವ ಮನೆಯಲ್ಲಿ ಯಾರೂ ಇಲ್ಲದ ವೇಳೆ ಎ. 28 ರಂದು ತಾ.ಪಂ. ಸಮೀಪದ ಸರಕಾರಿ ವಸತಿಗೃಹದ ಕೊಠಡಿಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹೊಸ ಎಳನಾಡಿನ ರಮೇಶ್ ಹಾಗೂ ಭಾಗ್ಯಮ್ಮ ಅವರ ಪುತ್ರ ಶಿವಪ್ರಸಾದ್ (14) ಆತ್ಮಹತ್ಯೆಗೆ ಶರಣಾದ ಬಾಲಕ.
ಹತ್ತು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದ ಶಿವಪ್ರಸಾದ್ ಆಟ ಆಡುತ್ತ ಲವಲವಿಕೆಯಿಂದ ಇದ್ದ. ಘಟನೆ ಸಂದರ್ಭ ದೊಡ್ಡಮ್ಮ ಮತ್ತು ಅವರ ಮಗ ಕೆಲಸಕ್ಕೆ ತೆರಳಿದ್ದು, ಪುತ್ರಿ ಕಾಲೇಜಿಗೆ ತೆರಳಿದ್ದಳು. ದೊಡ್ಡಮ್ಮ ಕೆಲಸದಿಂದ ಮಧ್ಯಾಹ್ನ ಮನೆಗೆ ಹಿಂದಿರುಗುವ ವೇಳೆ ಶಿವಪ್ರಸಾದ್ ಅತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ.
ತತ್‌ಕ್ಷಣ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ, ಮೃತ ಬಾಲಕನ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ. ಅವರು ಬರುವ ವರೆಗೆ ಮೃತದೇಹ ತೆರವು ಮಾಡದಂತೆ ಕೇಳಿಕೊಂಡಿದ್ದರಿಂದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯನ್ನು ಬೀಗ ಹಾಕಿ ಭದ್ರಗೊಳಿಸಲಾಯಿತು. ಬಳಿಕ ಹೆತ್ತವರ ಸಮಕ್ಷಮದಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ.
ಮೃತ ಶಿವಪ್ರಸಾದ್ ಅವರ ತಂದೆ ತಾಯಿ ಇಬ್ಬರು ಕೂಲಿ ಕೆಲಸ ಮಾಡುವವರಾಗಿದ್ದು ಈತ ಚಿತ್ರದುರ್ಗದ ಹೊಸೆಳನಾಡು ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿ ತೇರ್ಗಡೆ ಹೊಂದಿದ್ದ.
ರಜೆಯಲ್ಲಿ ಬಂದಿದ್ದ ಶಿವಪ್ರಸಾದ್ ದೊಡ್ಡಮ್ಮನ ಮಗನೊಂದಿಗೆ ಹಿಂದಿನ ದಿನ ಮಂಗಳೂರು ಮಾಲ್‌ಗೆ ತೆರಳಿದ್ದು ಶುಕ್ರವಾರ ಬೆಳಗ್ಗೆ ವ್ಯಾಯಾಮ ಶಾಲೆಗೆ ತೆರಳಿದ್ದರು. ಆದರೆ ಬಳಿಕ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಪೊಲೀಸ್ ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.
ಮೃತ ಶಿವಪ್ರಸಾದ್ ತಂದೆ, ತಾಯಿ, ಇಬ್ಬರು ಅಕ್ಕಂದಿರು, ತಂಗಿ ಯನ್ನು ಅಗಲಿದ್ದಾನೆ.