ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ಹಾಗೂ ಈಗಾಗಲೇ ನಿರ್ಮಾಣವಾಗಿರುವ ಬಹುತೇಕ ಮೇಲ್ಸೇತುವೆಗಳ ಕೆಳಭಾಗದ ಖಾಲಿ ಸ್ಥಳ ಈಗ ತ್ಯಾಜ್ಯ ವಿಲೇವಾರಿ ವಾಹನಗಳನ್ನು ನಿಲ್ಲಿಸುವ ತಾಣವಾಗಿ ಬದಲಾಗಿದೆ.
ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕೆಳಗಿನ ಖಾಲಿ ಸ್ಥಳ ತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆ ತಾಣಗಳಾಗಿ ಬದಲಾಗಿದೆ. ಅದೇ ರೀತಿ ಹೊಸಕೆರೆಹಳ್ಳಿ ಮತ್ತು ಲಿಂಗರಾಜಪುರ ಮೇಲ್ಸೇತುವೆ ಕೆಳಗಿರುವ ಖಾಲಿ ಪ್ರದೇಶಗಳು ಕಾರ್ ಪಾರ್ಕಿಂಗ್ ತಾಣಗಳಾಗಿ ಬದಲಾಗಿವೆ. ಇನ್ನೂ ಕೆಲವು ಮೇಲ್ಸೇತುವೆಗಳ ಕೆಳಗಿನ ಜಾಗ, ರಾತ್ರಿ ವೇಳೆ ನಿರಾಶ್ರಿತರ “ಆಸರೆ’ ತಾಣಗಳಾಗಿಯೂ ಬದಲಾಗುತ್ತದೆ. ಈ ಜಾಗಗಳನ್ನು ಸ್ವಚ್ಛವಾಗಿರಿಸಿಕೊಂಡರೆ ಬಿಬಿಎಂಪಿಗೆ ಆದಾಯವೂ ಬರಲಿದೆ.
ಮಳೆ ಬಂದರೆ ಸಮಸ್ಯೆ: ನಗರದ ವಿವಿಧ ಪ್ರದೇಶಗಳಲ್ಲಿನ ಮೇಲ್ಸೇತುವೆ ಕೆಳಗಿನ ಖಾಲಿ ಜಾಗದ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳದೆ ಇರುವುದರಿಂದ ಮಳೆ ಬಂದರೆ ಇಲ್ಲಿನ ತ್ಯಾಜ್ಯ ರಸ್ತೆಗಳಿಗೆ ಸೇರಿಕೊಳ್ಳುತ್ತಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಅದೇ ರೀತಿ ಕೆಲವೆಡೆ ಕಾಮಗಾರಿಯ ಸರಕುಗಳನ್ನು ಸೇತುವೆ ಕೆಳಗಿನ ಜಾಗದಲ್ಲಿ ಶೇಖರಿಸಲಾಗುತ್ತಿದ್ದು, ಈ ಕಚ್ಚಾ ವಸ್ತು ಮಳೆ ಬಂದರೆ ರಸ್ತೆಗೆ ಸೇರುತ್ತಿದೆ.
ಆದಾಯ ಮೂಲವಾಗಬಹುದು: ಪಾಲಿಕೆ ಮನಸು ಮಾಡಿದರೆ ನಗರದಲ್ಲಿರುವ ಹಲವಾರು ಮೇಲ್ಸೇತುವೆಗಳ ಕೆಳಭಾಗದಲ್ಲಿರುವ ಖಾಲಿ ಜಾಗವನ್ನು ಆದಾಯ ಮೂಲವಾಗಿ ಬದಲಾಯಿಸಬಹುದು. ಈಗಾಗಲೇ ಶ್ರೀರಾಮಪುರ, ಯಲಚೇನಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಇರುವ ಮೆಟ್ರೋ ನಿಲ್ದಾಣಗಳಲ್ಲಿನ ಖಾಲಿ ಜಾಗವನ್ನು ಮೆಟ್ರೋ ಸಂಸ್ಥೆ ಪಾರ್ಕಿಂಗ್‌ಗೆ ಬಳಸುತ್ತಿದ್ದು, ನಿಯಮಾನುಸಾರ ಟೆಂಡರ್ ಸಹ ಕರೆದಿದೆ. ನಗರದಲ್ಲಿ ಪಾರ್ಕಿಂಗ್ ಸಮಸ್ಯೆಯೂ ಇರುವುದರಿಂದ ಈ ಜಾಗಗಳನ್ನು ಪಾಲಿಕೆ ಅಭಿವೃದ್ಧಿಪಡಿಸಿದರೆ, ಪಾರ್ಕಿಂಗ್ ಸಮಸ್ಯೆಗೂ ಮುಕ್ತಿ ಸಿಗಲಿದೆ. ಸಾರ್ವಜನಿಕರು ದಂಡ ಕಟ್ಟುವುದೂ ತಪ್ಪಲಿದೆ.
ಕಿರು ಉದ್ಯಾನ ಅಭಿವೃದ್ಧಿ : ಈ ಸ್ಥಳದಲ್ಲಿ ಕಿರು ಉದ್ಯಾನ ಅಭಿವೃದ್ಧಿಪಡಿಸಲು ಸಹ ಅವಕಾಶವಿದೆ. ಆದರೆ, ಇದಕ್ಕೆ ಪಾಲಿಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಯಶವಂತಪುರ, ಮಲ್ಲೇಶ್ವರ ಸೇರಿದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಕಿರು ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವ ಕೆಲಸವಾಗಲಿಲ್ಲ. ಹೀಗಾಗಿ, ಈ ಯೋಜನೆಯೂ ನನೆಗುದಿಗೆ ಬಿದ್ದಿದೆ. ಈ ರೀತಿ ಮೇಲ್ಸೇತುವೆಗಳ ಕೆಳಭಾಗ ಮತ್ತು ಕೆಳಭಾಗಗಳಲ್ಲಿ ಕಿರು ಉದ್ಯಾನವನ್ನು ಅಭಿವೃದ್ಧಿಪಡಿಸುವುದರಿಂದ ನಗರದ ಸೌಂದರ್ಯ ವೃದ್ಧಿಸಲಿದೆ. ಈಗ ನಗರದ ವಿವಿಧ ಮೇಲ್ಸೇತುವೆಗಳ ಕೆಳ ಭಾಗದ ಜಾಗ ತ್ಯಾಜ್ಯ ಮತ್ತು ತ್ಯಾಜ್ಯ ವಿಲೇವಾರಿ ವಾಹನಗಳ ನಿಲುಗಡೆಯ ಕಾಯಂ ತಾಣವಾಗಿ ಬದಲಾಗಿವೆ. ಇದನ್ನು ಬದಲಿಸಿ, ಸ್ಥಳದ ಸಂಪೂರ್ಣ ಸದುಪಯೋಗ ಪಡೆಯಲು ಬಿಬಿಎಂಪಿ ಆಯುಕ್ತರು, ಮೇಯರ್ ಗಮನಹರಿಸಬೇಕಿದೆ.
ಶೌಚಾಲಯ ನಿರ್ಮಿಸಿದರೆ ಅನುಕೂಲ: ಈ ರೀತಿ ಮೇಲ್ಸೇತುವೆಗಳ ಕೆಳಭಾಗದ ಖಾಲಿ ಪ್ರದೇಶವನ್ನು ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೂ ಬಳಸಿಕೊಳ್ಳಬಹುದು. ನಗರದ ಬಹುತೇಕ ಭಾಗಗಳಲ್ಲಿ ಸಾರ್ವಜನಿಕ ಶೌಚಾಲಯ ಸಮಸ್ಯೆ ಇದ್ದು, ಸೇತುವೆ ಕೆಳಗೆ ಶೌಚಾಲಯ ನಿರ್ಮಿಸಿದರೆ ಬಯಲು ಪ್ರದೇಶಗಳಲ್ಲಿ ಸಾರ್ವಜನಿಕರು ಮಲ, ಮೂತ್ರ ವಿಸರ್ಜನೆ ಮಾಡುವುದಕ್ಕೂ ಕಡಿವಾಣ ಹಾಕಬಹುದಾಗಿದೆ.
-ಹಿತೇಶ್ ವೈ