Advertisement

‘ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಗ್ರಾಮದಲ್ಲಿ ಸ್ವಚ್ಛತೆಯೇ ಇಲ್ಲ!’

02:10 AM Jul 13, 2017 | Karthik A |

ಬೆಳ್ಮ: ತ್ಯಾಜ್ಯ ಸಮಸ್ಯೆ, ಆಧಾರ್‌ ಲಿಂಕ್‌ಗೆ ಪರದಾಡುವ ಸ್ಥಿತಿ, ಪಶು ವೈದ್ಯಕೀಯ ಸಮಸ್ಯೆ, ಕಾನೆಕೆರೆಯ ರಸ್ತೆ ಅಭಿವೃದ್ಧಿಯಾದರೂ ನಾದುರಸ್ತಿ ಸಹಿತ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ಬೆಳ್ಮ ಗ್ರಾಮ ಪಂಚಾಯತ್‌ ಗ್ರಾಮ ಸಭೆಯಲ್ಲಿ ನಡೆಯಿತು. ಪಂಚಾಯತ್‌ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್‌ ವಠಾರದಲ್ಲಿ ನಡೆದ ಸಭೆಯಲ್ಲಿ ತಾ.ಪಂ.ನ ಅಧಿಕಾರಿ ಲೋಕನಾಥ್‌ ನೋಡಲ್‌ ಅಧಿಕಾರಿಯಾಗಿ  ಭಾಗವಹಿಸಿದ್ದರು. ಸ್ವಚ್ಛತೆಗಾಗಿ ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಬೆಳ್ಮ ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಛತೆಯೇ ಇಲ್ಲವಾಗಿದೆ. ದೇರಳಕಟ್ಟೆ ಜಂಕ್ಷನ್‌ ಸುತ್ತಮುತ್ತ ತ್ಯಾಜ್ಯ ಕಾಣುತ್ತಿದೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಅನಾರೋಗ್ಯ ಉಂಟಾಗುವ ಭೀತಿಯಿದೆ. ಆರೋಗ್ಯ ಇಲಾಖೆಯೂ ಈ ಕುರಿತು ಮುತುವರ್ಜಿ ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

Advertisement

ತ್ಯಾಜ್ಯ ಸಮಸ್ಯೆ ಆರೋಪಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ನವೀನ್‌ ಹೆಗ್ಡೆ, ಈ ಹಿಂದೆ ಬಡಕಬೈಲು ಸರ್ವೆ ನಂಬ್ರ 48ರಲ್ಲಿ  ಘನ ತ್ಯಾಜ್ಯ ವಿಲೇವಾರಿ ಘಟಕದ ಸ್ಥಾಪನೆಯಾಗಿತ್ತು. ಅಲ್ಲಿಗೆ ತ್ಯಾಜ್ಯವನ್ನು ಕೊಂಡೊಯ್ಯುವ ವ್ಯವಸ್ಥೆಯೂ ಆಗಿತ್ತು. ಸಮರ್ಪಕವಾಗಿ ಘಟಕ ಕಾರ್ಯಾಚರಿಸುತ್ತಿದ್ದು, ಇದರಿಂದಲೇ ಪುರಸ್ಕಾರವೂ ಒದಗಿಬಂದಿತ್ತು. ಆದರೆ ಜಾಗದ ಕುರಿತು ಖಾಸಗಿಯವರು ನ್ಯಾಯಾಲಯದಲ್ಲಿ ದಾವೆ ಹೂಡಿರುವುದರಿಂದ ಸದ್ಯ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಜಾಗದ ಪರ ವಾದಿಸಲು ಪಂಚಾಯತ್‌ ಮೂಲಕ ನ್ಯಾಯವಾದಿಗಳನ್ನು ನೇಮಿಸಲಾಗಿದೆ. ಬಡಕಬೈಲಿಗೆ ಪರ್ಯಾಯವಾಗಿ ಸರ್ವೆ ನಂ. 54/1ರಲ್ಲಿ ತ್ಯಾಜ್ಯ ಸಂಗ್ರಹಣ ಘಟಕ ನಡೆಸಲು ಸ್ಥಳ ಗುರುತಿಸಲು ಮುಂದಾದರೂ ಅದು ಜನವಸತಿ ಪ್ರದೇಶವಾಗಿರುವುದರಿಂದ ಅದರಿಂದಲೂ ಹಿಂದೆ ಸರಿಯಲಾಗಿದೆ. ಬಡಕಬೈಲು ಪ್ರದೇಶವೇ ಸೂಕ್ತ ಆಗಿರುವುದರಿಂದ ನ್ಯಾಯಾಲಯದ ಆದೇಶ ಪಂಚಾಯತ್‌ ಪರ ಬರಲಿದೆ ಎಂಬ ವಿಶ್ವಾಸವಿದೆ. ಅನಂತರ ತ್ಯಾಜ್ಯ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು ಬೆಳ್ಮ ಪಂಚಾಯತ್‌ ವ್ಯಾಪ್ತಿಯಲ್ಲಿ ಹಲವು ಸರಕಾರಿ ಜಾಗಗಳಿವೆ. ಅದನ್ನು ಕಂದಾಯ ಇಲಾಖೆ  ಹುಡುಕಿ ಪಂಚಾಯತ್‌ ಗಮನಕ್ಕೆ  ತರಬೇಕಿದೆ ಎಂದರು.

ಪಶು ಚಿಕಿತ್ಸೆಗೆ ಸ್ಪಂದಿಸಿ
ಬೆಳ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಸಮಸ್ಯೆ ಬಂದರೆ ಪಶು ವೈದ್ಯರಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ದೂರವಾಣಿ ಕರೆಗೂ ಅವರು ಸ್ಪಂದಿಸುತ್ತಿಲ್ಲ. ಇದರಿಂದ ಅನಾರೋಗ್ಯಕ್ಕೀಡಾದ ಜಾನುವಾರುಗಳು ಸಾಯುತ್ತಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ ಎಂದು ಗ್ರಾಮಸ್ಥರೋರ್ವರು ಆರೋಪಿಸಿದರು.

ಪೊಲೀಸ್‌ ಬೀಟ್‌ ಹೆಚ್ಚಳ
ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಅಪರಾಧ ತಡೆಗೆ ಮಂಗಳೂರು ಕಮಿಷನರ್‌ ಆದೇಶದಂತೆ ಹಿಂದಿರುವ ಬೀಟ್‌ಗಳಲ್ಲಿ ಹೆಚ್ಚಳ ಮಾಡಿದ್ದು, ಸಾರ್ವಜನಿಕರನ್ನು ಸೇರಿಸಿ ಕೊಂಡು ಅವರನ್ನು ಮಾಹಿತಿದಾರರನ್ನಾಗಿ ಪೊಲೀಸರಿಗೆ ಸಹಕಾರ ನೀಡುವ ಕಾರ್ಯ ನಡೆಸಲಿದ್ದಾರೆ. ಒಟ್ಟು ನಾಲ್ಕು ತಂಡಗಳನ್ನು ರಚಿಸಿ ಬೀಟ್‌ ನಡೆಸುತ್ತಿದ್ದು, ಬೆಳ್ಮ ಪಂಚಾಯತ್‌ ವ್ಯಾಪ್ತಿಯಲ್ಲೂ ಈ ತಂಡ ಕಾರ್ಯಾಚರಣೆ ನಡೆಸಲಿದೆ.  ಪ್ರತಿ ಗ್ರಾಮದ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸ್‌ ಸಿಬಂದಿ ನೇಮಕ ಮಾಡಲಾಗಿದೆ ಎಂದು ಕೊಣಾಜೆ ಪೊಲೀಸ್‌ ಠಾಣೆ ಹೆಡ್‌ಕಾನ್‌ಸ್ಟೆಬಲ್‌ ಭಾಸ್ಕರ್‌ ಮಾಹಿತಿ ನೀಡಿದರು.

ಆಧಾರ್‌ ಸಮಸ್ಯೆ
ಆಧಾರ್‌ ಕಾರ್ಡ್‌ ನೋಂದಣಿ ಹಾಗೂ ಅದರಲ್ಲಿನ ಲೋಪದೋಷಗಳಿಗೆ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ. ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ಕಚೇರಿಯಿಂದ ಕಚೇರಿಗೆ ಅಲೆದಾಡುವ ಸ್ಥಿತಿಯಿದೆ ಎಂಬ ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಮುಂದಿನ ದಿನಗಳಲ್ಲಿ ಬೆಳ್ಮ ಪಂಚಾಯತ್‌ನಲ್ಲೂ ಆಧಾರ್‌ ಕೇಂದ್ರ ತೆರೆಯಲಾಗುವುದು ಎಂದರು. 

Advertisement

ಯೋಗ್ಯ ರಸ್ತೆ ನಿರ್ಮಿಸಿ
ಕಾನೆಕೆರೆಯಲ್ಲಿ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಖರ್ಚನ್ನು ಮಾತ್ರ ತೋರಿಸಲಾಗಿದೆ. ಆದರೆ ರಸ್ತೆ ಅಭಿವೃದ್ಧಿಯಾಗಿಲ್ಲ. ಕಳೆದ ಮೂರು ಗ್ರಾಮಸಭೆಗಳಲ್ಲೂ ರಸ್ತೆ ಅವ್ಯವಸ್ಥೆ ಕುರಿತು  ಹೇಳುತ್ತಲೇ ಬಂದಿದ್ದು, ಅಲ್ಲಿ ಸಂಚಾರಕ್ಕೆ ಯೋಗ್ಯ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥೆ ಪುಷ್ಪಾ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಸಂಬಂಧಪಟ್ಟ ಎಂಜಿನಿಯರ್‌ರನ್ನು ಕರೆಸಿ ಕಾಮಗಾರಿಯ ತನಿಖೆ ನಡೆಸಲಾಗುವುದು. ಉಳಿದ ಕಾಮಗಾರಿಯನ್ನು ಮಳೆಗಾಲ ಕಳೆದ ಬಳಿಕ ಮುಂದುವರಿಸಲಾಗುವುದು ಎಂದರು. ಉಪಾಧ್ಯಕ್ಷ  ಬಿ.ಎಂ. ಅಬ್ದುಲ್‌ ಸತ್ತಾರ್‌, ಅಭಿವೃದ್ಧಿ ಅಧಿಕಾರಿ ನವೀನ್‌ ಹೆಗ್ಡೆ, ತಾ.ಪಂ. ಸದಸ್ಯೆ  ನೂರ್‌ ಜಹಾನ್‌ ಸತ್ತಾರ್‌, ಕಾರ್ಯದರ್ಶಿ ಬಾಲಕೃಷ್ಣ ಗಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next