ಬಳ್ಳಾರಿ: ವಲಸೆ ಕಾರ್ಮಿಕರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಕೋವಿಡ್ ವೈರಸ್ ಸೋಂಕು ಜಿಲ್ಲೆಯಲ್ಲಿ ಮೊದಲಬಾರಿಗೆ ನಗರದ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಸೋಂಕಿತರನ್ನು ಆರೈಕೆ ಮಾಡುತ್ತಿದ್ದ ಸ್ಟಾಫ್ ನರ್ಸ್‌ಗೂ ತಗುಲಿದ್ದು ಆಸ್ಪತ್ರೆ ವೈದ್ಯರು, ನರ್ಸ್‌ಗಳಲ್ಲಿ ಆತಂಕ ಶುರುವಾಗಿದೆ. ನಗರದ ಕೋವಿಡ್ (ಜಿಲ್ಲಾ) ಆಸ್ಪತ್ರೆ ಐಸೋಲೇಷನ್ ವಾರ್ಡ್‌ನಲ್ಲಿ 14 ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಸ್ಟಾಫ್ (ಪುರುಷ) ನರ್ಸ್‌ಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ನಿರ್ಣಯದ ಪ್ರಕಾರ 14 ದಿನಗಳ ಕಾಲ ಕೆಲಸ ಮುಗಿಸಿದ ಬಳಿಕ ಸ್ಟಾಫ್ ನರ್ಸ್ ಅವರನ್ನು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ವೇಳೆ ಸಿಬ್ಬಂದಿಯ ಗಂಟಲು ದ್ರವ, ರಕ್ತದ ಮಾದರಿಯನ್ನು ಪಡೆದು ಕೋವಿಡ್ ಟೆಸ್ಟ್
ಮಾಡಿದಾಗ ಪಾಸಿಟಿವ್ ಬಂದಿದ್ದು, ಸೋಂಕಿತನನ್ನು ಕೂಡಲೇ ಸೋಮವಾರ ರಾತ್ರಿ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಡಿಸಿ ಎಸ್.ಎಸ್. ನಕುಲ್ ಸ್ಪಷ್ಟಪಡಿಸಿದ್ದಾರೆ.
ಮನೆಗೆ ತೆರಳಬೇಕಿದ್ದವನಿಗೆ ಸೋಂಕು ಪತ್ತೆ:
ನಿಯಮದಂತೆ ಸ್ಟಾಫ್ ನರ್ಸ್ ಕೋವಿಡ್ ರೋಗಿಗಳ ಚಿಕಿತ್ಸಾ ಸೇವೆ ನಂತರದ 14 ದಿನಗಳ ಕ್ವಾರಂಟೈನ್ ಮುಗಿಸಿ ಸೋಮವಾರ ಮನೆಗೆ ತೆರಳಬೇಕಿತ್ತು. ಮನೆಗೆ ತೆರಳುವ ಮುನ್ನ ಅವರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಆವರಿಸಿರುವುದು ಪತ್ತೆಯಾಗಿದೆ. ಆತನಲ್ಲಿ ಕೋವಿಡ್ ಸೋಂಕು ತಗುಲಿರುವ ಒಂದೇ ಒಂದು ಲಕ್ಷಣ ಇಲ್ಲ ಎನ್ನಲಾಗುತ್ತಿದೆ. ಸದ್ಯ ಸೇವೆ
ಸಲ್ಲಿಸುತ್ತಿದ್ದ ಆಸ್ಪತ್ರೆಯಲ್ಲಿಯೇ ಕೋವಿಡ್ ರೋಗಿ ಆಗಿ ಚಿಕಿತ್ಸೆ ಪಡೆಯುವಂತೆ ಆಗಿದೆ. ಇವರೊಂದಿಗೆ 15 ಜನ ನರ್ಸ್ ಸೇವೆಯಲ್ಲಿದ್ದರು. ಎಲ್ಲರೂ ಸೇವೆ ಮುಗಿಸಿಕೊಂಡ ನಂತರ ಹೋಟೆಲ್‌ನಲ್ಲಿ ತಂಗುತ್ತಿದ್ದರು.
ಇದೀಗ ಈ ಎಲ್ಲರಿಗೂ ಸೋಂಕಿನ ಭಯ ಆವರಿಸಿದೆ. ಇದರ ಜೊತೆಗೆ ಕೋವಿಡ್ ರೋಗಿಗಳ ತಪಾಸಣೆ ನಡೆಸಿದ ವೈದ್ಯರೂ ಸಹ ಸೋಂಕು ತಗುಲುವ ಆತಂಕ್ಕಕ್ಕೀಡಾಗಿದ್ದರೆ.
ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ನೀಡಲಾಗಿತ್ತು. ಆದರೂ ಸಹ ಸೋಂಕು ತಗುಲಿರುವುದು ಜಿಲ್ಲಾಡಳಿತ, ಕೋವಿಡ್ ಆಸ್ಪತ್ರೆ ಸಿಬ್ಬಂದಿ, ವೈದ್ಯರನ್ನು ಚಿಂತೆಗೀಡುಮಾಡಿದೆ. ಸದ್ಯ ಸೋಂಕಿತ ನರ್ಸ್ ಜೊತೆಗೆ ಕಾರ್ಯ ನಿರ್ವಹಿಸಿದ್ದ 14 ಜನ ಶುಶ್ರೂಷಕರನ್ನೂ ಕ್ವಾರಂಟೈನ್ ನಲ್ಲಿಡಲಾಗಿದ್ದು, ಎಲ್ಲರ ಗಂಟಲು ದ್ರವವನ್ನು ಮತ್ತೂಮ್ಮೆ ಪರೀಕ್ಷೆಗೆ ರವಾನಿಸಲಾಗಿದೆ. ಐಸೋಲೇಷನ್ ವಾರ್ಡ್‌ನಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಪಿಪಿಇ ಕಿಟ್‌ಗಳನ್ನು ನೀಡಲಾಗಿದೆ. ಆದರೂ ಸಿಬ್ಬಂದಿಗೆ ಸೋಂಕು ಆವರಿಸಿರುವುದು ಹೇಗೆ?ಎಂಬ ಪ್ರಶ್ನೆ ಜಿಲ್ಲಾಡಳಿತವನ್ನು ಕಾಡುತ್ತಿದೆ. ಆದರೆ, ಸಿಬ್ಬಂದಿಗೆ
ನೀಡುತ್ತಿದ್ದ ಪಿಪಿಇ ಕಿಟ್‌ಗಳಲ್ಲಿ ಕೆಲವು ಗುಣಮಟ್ಟದಿಂದ ಇಲ್ಲ ಎಂಬ ಆರೋಪ ಆರೋಗ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಕೇಳಿಬರುತ್ತಿದೆ.