ಬಳ್ಳಾರಿ: ಮುಂಗಾರು ಹಂಗಾಮಿನಲ್ಲಿ ಬೆಳೆದ ಜೋಳ, ರಾಗಿ, ಕಡಲೆ ಬೆಳೆ ಖರೀದಿಗೆ ಖರೀದಿ ಕೇಂದ್ರ ತೆಗೆದಿರುವ ರಾಜ್ಯ ಸರ್ಕಾರ, ಹಿಂಗಾರಿನಲ್ಲಿ ಬೆಳೆದ ಬೆಳೆಗಳನ್ನೂ ಖರೀದಿ ಕೇಂದ್ರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಬೇಕು ಎಂದು ರಾಜ್ಯರೈತ ಸಂಘ ಹಸಿರುಸೇನೆ (ನಂಜುಂಡಸ್ವಾಮಿ ಬಣ)ಯ ಜಿಲ್ಲಾಧ್ಯಕ್ಷ ಆರ್.ಮಾಧವರೆಡ್ಡಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಬೆಳೆಯಲಾಗಿದ್ದ ಜೋಳ, ರಾಗಿ, ಕಡಲೆ ಬೆಳೆಗಳನ್ನು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಇದೀಗ ಹಿಂಗಾರಿನಲ್ಲಿ ಬೆಳೆದ ಬೆಳೆಯನ್ನು ಕಟಾವು ಮಾಡಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳ ಖರೀದಿಗಾಗಿ ಇದೀಗ ಖರೀದಿ ಕೇಂದ್ರವನ್ನು ತೆರೆಯಲು ಆದೇಶ ಹೊರಡಿಸಿದ್ದು, ಮಾ. 16ರಿಂದ ಕೇಂದ್ರವನ್ನು ತೆರೆಯಲಾಗುತ್ತದೆ. ಆದರೆ, ಕೇಂದ್ರದಲ್ಲಿ ಮಾರಲು ರೈತರಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಯಿಲ್ಲ. ಎಲ್ಲವನ್ನೂ ಈಗಾಗಲೇ ಖಾಸಗಿಯವರಲ್ಲಿ ಮಾರಾಟ ಮಾಡಿದ್ದಾರೆ. ಮೇಲಾಗಿ ಸರ್ಕಾರ ವಿಧಿ ಸಿರುವ ನಿಯಮಗಳಿಂದಾಗಿ ರೈತರು ಸಹ ಖರೀದಿ ಕೇಂದ್ರದಲ್ಲಿ ಬೆಳೆಯನ್ನು ಮಾರಲು ಹಿಂಜರಿಯುತ್ತಾರೆ. ಈ ಬಾರಿ ಆನ್‌ಲೈನ್ ಮೂಲಕ ಮೂರು ಮಾತ್ರ ಕೇಂದ್ರದಲ್ಲಿ ಮಾರಾಟ ಮಾಡಿದ್ದಾರೆ. ಹಾಗಾಗಿ ಖರೀದಿ ಕೇಂದ್ರದಲ್ಲಿ ವಿಧಿಸಿರುವ ನಿಯಮಗಳನ್ನು ಸಡಿಲಿಕೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದವರು ಆಗ್ರಹಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಎಲ್ಲ ಬೆಳೆಗಳು ಈಗಾಗಲೇ ದಲ್ಲಾಳಿಗಳ ಕೈಸೇರಿವೆ. ಇಂಥ ಸಂದರ್ಭದಲ್ಲಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಉಪಯೋಗವೂ ಇಲ್ಲ. ಮೇಲಾಗಿ ಖರೀದಿ ಕೇಂದ್ರ ತೆರೆಯುತ್ತಿದ್ದಂತೆ ಬೆಳೆಗಳ ಬೆಲೆಯೂ ಕುಸಿದಿದೆ. ಜೋಳ 3000 ರೂ. ಬೆಲೆಯಿಂದ 1600ಕ್ಕೆ ಕುಸಿದಿದೆ. ಮೇಲಾಗಿ ಖರೀದಿ ಕೇಂದ್ರದಲ್ಲಿ 5 ಎಕರೆಯೊಳಗಿನ ರೈತರಿಗೆ ಭತ್ತಕ್ಕೆ 40 ಕ್ವಿಂಟಲ್, ಜೋಳಕ್ಕೆ 70 ಕ್ವಿಂಟಲ್‌ಗೆ ಸೀಮಿತಗೊಳಿಸಲಾಗಿದೆ. ಈ ನಿಯಮ ರೈತರಿಗೆ ಅನಾನುಕೂಲವಾಗುತ್ತಿದ್ದು, ನಿಯಮಗಳಲ್ಲಿ ಸಡಿಲಿಕೆ ನೀಡಬೇಕು ಎಂದು ಕೋರಿದರು.
ಮುಂಗಾರು ಹಂಗಾಮು ಬೆಳೆ ಖರೀದಿಗೆ ತೆರೆಯಲಾಗಿದ್ದ ಖರೀದಿ ಕೇಂದ್ರಗಳನ್ನು ಹಿಂಗಾರು ಹಂಗಾಮು ಬೆಳೆ ಖರೀದಿಗೂ ಖರೀದಿ ಕೇಂದ್ರ ತೆರೆಯಬೇಕು. ಸರಕುಗಳ ಬೆಲೆ ನಿಗದಿಪಡಿಸಿದಂತೆ ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವುದನ್ನು ರೈತರಿಗೆ ನೀಡಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಲಕ್ಷ್ಮೀ ಪತಿ ಅಸುಂಡಿ, ಜಿ.ಲಕ್ಷ್ಮೀಕಾಂತರೆಡ್ಡಿ, ಬಸವರಾಜ, ಹುಲುಗಪ್ಪ, ಕರಿಯಪ್ಪ ಗುಡಿಮನಿ, ಅನಿಲ್ ಕುಮಾರ್‌ರೆಡ್ಡಿ ಸೇರಿದಂತೆ ಹಲವರು ಇದ್ದರು.