Advertisement

ಭ್ರೂಣ ಹತ್ಯೆಯಿಂದ ಲಿಂಗಾನುಪಾತ ಅಸಮತೋಲನ

08:00 PM Mar 05, 2020 | Naveen |

ಬಳ್ಳಾರಿ: ಹೆಣ್ಣು ಮಕ್ಕಳನ್ನು ನಮ್ಮ ದೇಶದಲ್ಲಿ ದೇವತೆ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಹೆಣ್ಣನ್ನು ಪೂಜ್ಯ ಭಾವದಿಂದ ಕಾಣುವ ನಾವುಗಳೇ ಹೆಣ್ಣು ಮಕ್ಕಳು ಬೇಡ ಎಂದು ಭ್ರೂಣದಲ್ಲೆ ಹತ್ಯೆ ಮಾಡಿದರೆ, ಹೆಣ್ಣಿನ ಸಂತತಿಯು ಕುಸಿಯುತ್ತದೆ ಮತ್ತು ಅಸಮತೋಲನದಿಂದ ಲಿಂಗಾನುಪಾತ ಉಂಟಾಗಿ ಹೆಣ್ಣು ಸಂತತಿ ನಾಶವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌
ಬೇಸರ ವ್ಯಕ್ತಪಡಿಸಿದರು.

Advertisement

ನಗರದ ಖಾಸಗಿ ಹೊಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಮತ್ತು ಖಾಸಗಿ ವೈದ್ಯರಿಗಾಗಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರವಿಧಾನಗಳ 1994 ಕಾಯ್ದೆ ಕುರಿತ ಕಾರ್ಯಾಗಾರಕ್ಕೆ ಚಾಲನೆ
ನೀಡಿ ಮಾತನಾಡಿದರು. ಅಸ್ಪತ್ರೆಗೆ ಭೇಟಿ ನೀಡುವ ಕೆಲ ರೋಗಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನೆಪವಾಗಿಸಿಕೊಂಡು ಭ್ರೂಣಪತ್ತೆಗೆ ಬೇಡಿಕೆ ಇಡಬಹುದು. ಅಂಥವರಿಗೆ ತಾವುಗಳು ಮನವೊಲಿಸಿ ಲಿಂಗಾನುಪಾತದಿಂದ ಆಗುವ ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಸಬೇಕು. ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆಯಂತ ಕಾನೂನುಬಾಹಿರ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಬಾರದು ಎಂದು ಎಚ್ಚರಿಸಿದ ಡಿಸಿ ನಕುಲ್‌, ಈ ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲರು ಕಾರ್ಯಪ್ರವೃತ್ತರಾಗಬೇಕು ಎಂದರು.

ತಮ್ಮ ತಮ್ಮ ಸ್ಕ್ಯಾನಿಂಗ್‌ ಸೆಂಟರ್‌/ಇಮೇಜಿಂಗ್‌ ಸೆಂಟರ್‌ಗೆ ಬರುವ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಅವರ ದಾಖಲಾತಿಗಳನ್ನು ಪಡೆಯುವುದರ ಜೊತೆಗೆ ಬಾಲಿಕಾ ಸಾಫ್ಟ್ವೇರ್‌ನಲ್ಲಿ ನೋಂದಾಯಿಸಿ ಫಾರಂ ಎಫ್‌ ಅನ್ನು ಸಹ ಕಡತದಲ್ಲಿ ಸೇರಿಸಿ ಆರೋಗ್ಯ ಇಲಾಖೆಗೆ ಸಲ್ಲಿಸಿ ಸ್ವೀಕೃತಿವನ್ನು ತಮ್ಮ ಸಂಸ್ಥೆಯಲ್ಲಿ ಸಂರಕ್ಷಿಸಿ ಇಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿಎಚ್‌ಒ ಡಾ| ಎಚ್‌. ಎಲ್‌.ಜನಾರ್ಧನ್‌ ಮಾತನಾಡಿ, ಭಾವನಾತ್ಮಕ ಒತ್ತಡಗಳು ಹೆಚ್ಚಾಗುವುದರಿಂದ ಇಂಥ ಪ್ರಕರಣಗಳು ಹೆಚ್ಚಾಗುತ್ತವೆ. ಶೇ. 90ರಷ್ಟು ವೈದ್ಯರು ಸಮಾಜಮುಖೀಯಾಗಿ ಕಾನೂನನ್ನು ಪಾಲಿಸುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ದಕ್ಷಿಣ ಕರ್ನಾಟಕ ಭಾಗದ ಹಾಸನ, ಕೊಡಗು, ಚಿಕ್ಕಮಗಳೂರು, ಉಡುಪಿ, ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಲಿಂಗಾನುಪಾತದಲ್ಲಿ ಸಮತೋಲನ ಕಾಪಾಡಿಕೊಂಡಿದೆ. ಅದರಲ್ಲೂ ಕೊಡಗು ಮೊದಲ ಸ್ಥಾನದಲ್ಲಿದೆ ಎಂದರು.

ಕೆಲ ಜಿಲ್ಲೆಗಳಲ್ಲಿ ಲಿಂಗಪತ್ತೆ ಪ್ರಕರಣಗಳು ಕಂಡು ಬಂದಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಲಿಂಗಪತ್ತೆಯಂಥ ಕಾನೂನು ಬಾಹಿರ ಪ್ರಕರಣಗಳು ದಾಖಲಾಗದಂತೆ ಎಚ್ಚರವಹಿಸಬೇಕು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

Advertisement

ಕಾರ್ಯಗಾರದಲ್ಲಿ ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯ್ದೆ ಅನುಷ್ಟಾನ, ಪಿ.ಸಿ ಮತ್ತು ಪಿ.ಎನ್‌.ಡಿ.ಟಿ ಕಾಯ್ದೆ ಕುರಿತು ಕಾನೂನಿನ ಅರಿವು ಹಾಗೂ ಸಲಹೆ ಎಂ.ಟಿ.ಪಿ ಕಾಯ್ದೆ ಕುರಿತು ಉಪನ್ಯಾಸ ಹಾಗೂ ಬಾಲಿಕ ಸಾಫ್ಟ್‌ ವೇರ್‌ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ
ಅ ಕಾರಿ ಡಾ| ಆರ್‌.ವಿಜಯಲಕ್ಷ್ಮೀ , ಪಿಸಿ ಮತ್ತು ಪಿಎನ್‌ಡಿಟಿ ಕಾನೂನು ಸಲಹೆಗಾರರಾದ ಅಖೀಲಾ, ಸ್ತ್ರೀರೋಗ ತಜ್ಞೆ ಡಾ.ಜಯಪ್ರದಾ ಹಾಗೂ ಬಾಲಿಕಾ ಸಾಫ್ಟ್‌ವೇರ್‌ನ ಜಿ.ಕೆ. ವಿಶ್ವನಾಥ
ಉಪನ್ಯಾಸ ನೀಡಿದರು.

ಇದೇ ವೇಳೇ ಕಾರ್ಯಾಗಾರಕ್ಕೆ ಆಗಮಿಸಿದ ವೈದ್ಯರು, ಸ್ಕ್ಯಾನಿಂಗ್‌ ಸೆಂಟರ್‌/ಇಮೇಜಿಂಗ್‌ ಸೆಂಟರ್‌ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಎಸ್‌.ಕೆ.ಅರುಣ್‌, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಎಸ್‌.ಪ್ರೇಮಾ, ಕಿರಿಯಪುರುಷ ಅರೋಗ್ಯ ಸಹಾಯಕ ಅರುಣ್‌ ಕುಮಾರ್‌, ಗೋಪಾಲ್‌ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸ್ಕ್ಯಾನಿಂಗ್‌ ಸೆಂಟರ್‌/ಇಮೇಜಿಂಗ್‌ ಸೆಂಟರ್‌ನ ಸಿಬ್ಬಂದಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next