ಬಳ್ಳಾರಿ: ಕೆಆರ್ ಪಿಪಿ ಮತ್ತು ಬಿಜೆಪಿ ವಿಲೀನ ಪ್ರಕ್ರಿಯೆ ಬಳಿಕ ಬಳ್ಳಾರಿಯಲ್ಲಿ ಭರ್ಜರಿ ಬೆಳವಣಿಗೆ ನಡೆದಿದ್ದು, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸಭೆ ಮಾಡಲು ಮುಂದಾದ ರೆಡ್ಡಿ ಪತ್ನಿಗೆ ಆರತಿ ಬೆಳಗಿ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಸ್ವಾಗತ ಕೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಅರುಣಾ, ಮೋದಿ ಕೈ ಬಲಪಡಿಸಲು ಬಿಜೆಪಿ ಸೇರ್ಪಡೆಯಾಗಿದ್ದೇವೆ. ನನ್ನ ತವರುಮನೆ ಬಿಜೆಪಿ ಮಾತೃ ಪಕ್ಷಕ್ಕೆ ಬಂದಿರುವದು ಸಂತೋಷವಾಗಿದೆ ಎಂದರು.
ವಿಧಾನಸಭೆ ಸೋಲಿನ ಬಗ್ಗೆ ಮಾತನಾಡುವುದಿಲ್ಲ. ಸ್ವಲ್ಪ ರಾಜಕೀಯ ಕಹಿ ಘಟನೆ ನಡೆದಿದೆ. ಹಿಂದಿನ ಘಟನೆ ಮರೆತು ಶ್ರೀರಾಮುಲು ಅವರನ್ನು ಗೆಲ್ಲಿಸುವ ಗುರಿ ಇಟ್ಟುಕೊಂಡು ಪಕ್ಷಕ್ಕೆ ಬಂದಿದ್ದೇವೆ. ಪಕ್ಷ ಕೊಟ್ಟಿರುವ ಜವಾಬ್ದಾರಿ ನಿಭಾಯಿಸುವ ಮೂಲಕ ಶ್ರೀರಾಮುಲು ಗೆಲ್ಲಿಸುವೆ ಎಂದರು.
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಮಧ್ಯೆ ವೈಮನಸ್ಸಿದೆ ಎಂದು ಯಾರು ಹೇಳಿದರು. ಸ್ವಲ್ಪ ರಾಜಕೀಯ ಬೆಳವಣಿಗೆ ನಡೆದಿದೆ. ಹಿಂದಿನ ಘಟನೆ ಮಾತನಾಡುವುದಿಲ್ಲ. ಕೆಆರ್ ಪಿಪಿ ಬಿಜೆಪಿ ಇಬ್ಬರು ಕಾರ್ಯಕರ್ತರನ್ನು ಒಗ್ಗೂಡಿಸಿ ಬಿಜೆಪಿ ವಿಜಯ ಪತಾಕೆ ಹಾರಿಸುತ್ತೇವೆ ಎಂದರು.
ಲಕ್ಷ್ಮೀ ಅರುಣಾ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಬಿಜೆಪಿ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಬರುವ ಮೂಲಕ ಬಿಜೆಪಿ ಸೋಲಿಗೆ ಕಾರಣವಾಗಿದ್ದರು.