ಬಳ್ಳಾರಿ: ನಗರ ಪ್ರದೇಶಗಳ ಮಾದರಿಯಲ್ಲೇ ಇನ್ನು ಮುಂದೆ ಗ್ರಾಮೀಣ ಭಾಗದಲ್ಲೂ ದಿನದ 24×7 ಕುಡಿಯುವ ನೀರು ಲಭ್ಯವಾಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಜಲಜೀವನ ಮೀಷನ್ ಯೋಜನೆಯಡಿ “ಘರ್ ಘರ್ ಕಾ ಪಾನಿ’ ಹೆಸರಲ್ಲಿ ಮನೆ-ಮನೆಗೆ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಶೀಘ್ರದಲ್ಲೇ ಈ ಯೋಜನೆ ಜಾರಿಗೆ ಬರಲಿದೆ.
ಕೇಂದ್ರ ಸರ್ಕಾರ ಈ ಮೊದಲು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯನ್ನು ಜಲ ಜೀವನ ಮಿಷನ್ ಎಂದು ಹೆಸರು ಬದಲಾಯಿಸಿದೆ. ಈ ಮಿಷನ್ ಅಡಿಯಲ್ಲಿ ಗ್ರಾಮೀಣ ಭಾಗಕ್ಕೂ “ಘರ್ ಘರ್ ಕ ಪಾನಿ’ ಹೆಸರಲ್ಲಿ ಪ್ರತಿಯೊಂದು ಮನೆಗೂ ನಳ ಸಂಪರ್ಕ ಕಲ್ಪಿಸುವ ಮೂಲಕ ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಸಲು ಮುಂದಾಗಿದೆ. ಈ ಕುರಿತು ಈಗಾಗಲೇ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದ್ದು, ಅಂದುಕೊಂಡಂತೆ ಎಲ್ಲರೂ ನಡೆದರೆ, ಶೀಘ್ರದಲ್ಲೇ ಯೋಜನೆ ಜಾರಿಗೆ ಬರಲಿದೆ. ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಬಹುತೇಕ ಗ್ರಾಮಗಳು ನೀರಿನ ಸಮಸ್ಯೆಯಿಂದ ಮುಕ್ತಗೊಳ್ಳಲಿದೆ.
ರಾಜ್ಯ ಸರ್ಕಾರ, ಗ್ರಾಪಂ ಸಹಭಾಗಿತ್ವ: ಗ್ರಾಮೀಣ ಭಾಗದಲ್ಲಿ ಮನೆ-ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವ ಜಲ ಜೀವನ ಮಿಷನ್ ಯೋಜನೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಜಾರಿಗೆ ಬರಲಿದೆ. ಯೋಜನೆಗೆ ಕೇಂದ್ರ, ರಾಜ್ಯ ಸರ್ಕಾರ ತಲಾ ಶೇ.45 ಅನುದಾನ ನೀಡಿದರೆ, ಸ್ಥಳೀಯ ಗ್ರಾಪಂ ಶೇ.10 ಅನುದಾನ ನೀಡಬೇಕಿದ್ದು, ನಿರ್ವಹಣೆಯನ್ನೂ ಸ್ಥಳೀಯ ಗ್ರಾಪಂನವರೇ ವಹಿಸಿಕೊಳ್ಳಬೇಕಾಗಲಿದೆ.
ಬಹುಗ್ರಾಮ ಕೆರೆಗಳಿಂದ ನೀರು ಪೂರೈಕೆ: ಗ್ರಾಮೀಣ ಭಾಗದಲ್ಲಿ ಮನೆ-ಮನೆಗೆ ನಳ ಸಂಪರ್ಕ ಕಲ್ಪಿಸಲು ಸ್ಥಳೀಯ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಯಡಿ ನಿರ್ಮಿಸಲಾಗಿರುವ ಕೆರೆಗಳನ್ನೇ ಬಳಕೆ ಮಾಡಿಕೊಳ್ಳಲಾಗುತ್ತದೆ. ಜತೆಗೆ ಪ್ರತಿ ಮನೆಗೆ ಸಂಪರ್ಕ ಕಲ್ಪಿಸುವ ನಳಕ್ಕೆ ಮೀಟರ್‌ಗಳನ್ನೂ ಅಳವಡಿಸಲಿದ್ದು, ಜನರು ಬಳಸಿದಷ್ಟು ನೀರಿಗೆ ಸ್ಥಳೀಯ ಗ್ರಾಪಂಗೆ ಕರ ಪಾವತಿಸಬೇಕಿದೆ. ಈ ಮೂಲಕ ನೀರನ್ನು ವೃಥಾ ಖರ್ಚು ಮಾಡುವುದು ನಿಯಂತ್ರಣಗೊಳ್ಳಲಿದೆ. ಜತೆಗೆ ಮನೆಗಳಲ್ಲೂ ಪಾತ್ರೆ, ಡ್ರಮ್‌ಗಳಲ್ಲಿ ವಾರಗಟ್ಟಲೆ ನೀರು ಸಂಗ್ರಹಿಸಿಕೊಟ್ಟುಕೊಳ್ಳುವುದು ಕಡಿಮೆಯಾಗಲಿದೆ. ನೀರಲ್ಲಿ ಲಾರ್ವಗಳಿಂದ ಹರಡುವ ಕಾಯಿಲೆಗಳಿಗೂ ಸಾಧ್ಯವಾದಷ್ಟು ಬ್ರೇಕ್ ಬೀಳುವ ಸಾಧ್ಯತೆಯಿದೆ ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆಯ ಇಇ ಆರ್.ಪ್ರಭು ಸ್ಪಷ್ಟಪಡಿಸುತ್ತಾರೆ.
ಸಮಸ್ಯೆಯಿಂದ ಮುಕ್ತ: ಗಣಿನಾಡು ಬಳ್ಳಾರಿ ಜಿಲ್ಲೆ ಸೇರಿ ರಾಜ್ಯದಲ್ಲೂ ಹಲವಾರು ಗ್ರಾಮಗಳಲ್ಲಿ ಇಂದಿಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಮೇಲಾಗಿ ಬೇಸಿಗೆ ಎರಡು ತಿಂಗಳಲ್ಲಂತೂ ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಜಿಲ್ಲೆಯ ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್ ಮಾರಾಟವೇ ನಡೆಯುತ್ತದೆ. ಇನ್ನು ಕೆಲ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ನಿಂದ, ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಜಲ ಜೀವನ ಮಿಷನ್‌ಅಡಿ “ಘರ್ ಘರ್ ಕಾ ಪಾನಿ’ ಯೋಜನೆಯಿಂದಾದರೂ ಗ್ರಾಮಗಳಲ್ಲಿ ಪ್ರತಿ ಮನೆಗೆ ಕುಡಿವ ನೀರು ಪೂರೈಕೆಯಾತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.
ಕೇಂದ್ರ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆ ಹೆಸರನ್ನು ಜಲ ಜೀವನ ಮಿಷನ್ ಎಂದು ಬದಲಿಸಿದ್ದು, ಈ ಮಿಷನ್ ಅಡಿಯಲ್ಲಿ ಗ್ರಾಮೀಣ ಭಾಗದ ಪ್ರತಿ ಮನೆಗೆ ಘರ್ ಘರ್ ಕಾ ಪಾನಿ ಹೆಸರಲ್ಲಿ ಪ್ರತಿ ಮನೆಗೆ ಕುಡಿವ ನೀರಿನ ನಳ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಈ ಮೂಲಕ ಗ್ರಾಮೀಣ ಜನರಿಗೆ ದಿನದ 24 ಗಂಟೆಯೂ ನೀರು ಪೂರೈಸುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕೆ ಕೇಂದ್ರ ಸರ್ಕಾರ ಶೇ.45, ರಾಜ್ಯ ಸರ್ಕಾರ ಶೇ.45, ಗ್ರಾಪಂ ಶೇ.10 ಅನುದಾನ ನೀಡಲಿದೆ. ಇದಕ್ಕಾಗಿ ಕ್ರಿಯಾ ಯೋಜನೆ ಸಿದ್ಧಗೊಳ್ಳುತ್ತಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ.
– ಆರ್.ಪ್ರಭು,
ಇಇ, ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಬಳ್ಳಾರಿ
– ವೆಂಕೋಬಿ ಸಂಗನಕಲ್ಲು