ಗಂಗಾವತಿ: ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಂಕಷ್ಟದಲ್ಲಿ ಜನರು ಬದುಕು ನಡೆಸುತ್ತಿದ್ದಾರೆ. ಈ ಮಧ್ಯೆ ಬಳ್ಳಾರಿ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗವು ಅವೈಜ್ಞಾನಿಕವಾಗಿ ಗೋಲ್ಡನ್ ಚಾನ್ಸ್ ನೀಡಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ ವಿಧಿಸುವ ಮೂಲಕ ವಿದ್ಯಾರ್ಥಿಗಳ ಆಕ್ರೋಶಕ್ಕೆ ಒಳಗಾಗಿದೆ.
ಹಲವಾರು ಬಾರಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಮನವಿಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಿಂಡಿಕೇಟ್ ಸಭೆಯಲ್ಲಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪರೀಕ್ಷೆ ಬರೆಯದ ಅಥವಾ ಕೆಲವು ವಿಷಯಗಳಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ವಿವಿ ಅವಕಾಶ ಕಲ್ಪಿಸಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಉಳಿದ ಸೆಮಿಸ್ಟರ್ ಪರೀಕ್ಷೆ ನಡೆಸಲು ಆಡಳಿತ ಮಂಡಳಿ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಇದನ್ನೂ ಓದಿ:ಸರಿಯಾಗಿ ಬಸ್ ಬಾರದ ಹಳ್ಳಿಯ ಪ್ರತಿಭೆಗೆ 20 ಚಿನ್ನದ ಪದಕದ ಗರಿಮೆ
ವಿವಿ ಏಕಪಕ್ಷೀಯವಾಗಿ ಪ್ರತಿ ಸೆಮಿಸ್ಟರ್ ಗೆ 5 ಸಾವಿರ ರೂ ಪರೀಕ್ಷಾ ಶುಲ್ಕವನ್ನು ನಿಗದಿ ಮಾಡಿದ್ದು ಅವೈಜ್ಞಾನಿಕವಾಗಿದೆ ಮತ್ತು ಕೋವಿಡ್ ಸಂಕಷ್ಟದಲ್ಲಿ ಪಾಲಕರು ಹಣಕಾಸಿನ ತೊಂದರೆಯಲ್ಲಿರುವ ಸಂದರ್ಭದಲ್ಲಿ ವಿವಿ ಇದನ್ನು ಯೋಚನೆ ಮಾಡದೆ 5 ಸಾವಿರ ಅಧಿಕ ಶುಲ್ಕ ವಿಧಿಸಿರುವುದಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶೀಲನೆ: ಗೋಲ್ಡನ್ ಚಾನ್ಸ್ ನಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿರುವ ಕುರಿತು ಹಲವಾರು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ತಮಗೆ ದೂರವಾಣಿ ಮೂಲಕ ಮನವಿ ಮಾಡಿದ್ದು, ವಿವಿಯ ಕುಲಪತಿ ಮತ್ತು ಪರೀಕ್ಷಾ ಕುಲ ಸಚಿವರ ಜೊತೆ ಮಾತನಾಡಿ ಶುಲ್ಕ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಬಳ್ಳಾರಿ ವಿವಿ ಆಡಳಿತ ಮಂಡಳಿಯ ನಾಮ ನಿರ್ದೇಶನ ಸದಸ್ಯ ಶಿವಾನಂದ ಮೇಟಿ ‘ಉದಯವಾಣಿ’ ಗೆ ತಿಳಿಸಿದ್ದಾರೆ.