Advertisement

ಮಳೆಯಿಂದಾದ ನಷ್ಟಕ್ಕೆ ಶೀಘ್ರ ಪರಿಹಾರ ಕೊಡಿ

12:32 PM Sep 28, 2019 | Naveen |

ಬಳ್ಳಾರಿ: ಜಿಲ್ಲೆಯಾದ್ಯಂತ ಕಳೆದ ಐದಾರು ದಿನಗಳಿಂದ ಸುರಿದ ಬಾರಿ ಮಳೆಗೆ ಕೊಟ್ಯಾಂತರ ರೂ. ಹಾನಿ ಸಂಭವಿಸಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸತೀಶ್‌ ಕುಮಾರ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

Advertisement

ಕಳೆದ ಐದಾರು ದಿನಗಳಿಂದ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಬೆಳೆದ ನಾನಾ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ. ಇದರ ಜೊತೆಗೆ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಾಕಷ್ಟು ಮನೆಗಳು ಕುಸಿದಿದ್ದು, ವಾಸಿಸಲು ನೆಲೆ ಇಲ್ಲದಂತಾಗಿದೆ. ಅದರಲ್ಲೂ ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಹೆಚ್ಚು ನಷ್ಟ ಸಂಭವಿಸಿದ್ದು, ಕೂಡಲೇ ಪರಿಹಾರ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ನೆಲೆ ಕಳೆದುಕೊಂಡವರಿಗೆ, ಸೂರು ಕಲ್ಪಿಸಬೇಕು. ಲಕ್ಷಾಂತರ ರೂ. ಖರ್ಚು ಮಾಡಿ ನಾನಾ ಕಡೆ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ಕೂಡಲೇ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲೆಯ ನಾನಾ ಕಡೆ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ಕಂಗಾಲಾಗಿದ್ದಾರೆ. ದರೂರು, ಮುಷ್ಟಗಟ್ಟೆ, ಕುರಗೋಡು ಸೇರಿದಂತೆ ನಾನಾ ಕಡೆ ಶಾಲಾ ಆವರಣದಲ್ಲಿ ನೀರು ನಿಂತಿದ್ದು, ಮಕ್ಕಳಿಗೆ ತೊಂದರೆಯಾಗಿದೆ. ಕೆಲ ಶಾಲೆಗಳಲ್ಲಿ ನೀರು ನುಗ್ಗಿ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಬಡ ಜನರು ನೆಲೆ ಕಳೆದುಕೊಂಡಿದ್ದಾರೆ. ಜಿಲ್ಲೆಯ ಅಸುಂಡಿ ಹಾಗೂ ಆಗಲೂರು ಗ್ರಾಮದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ. ಎರಡೂ ಗ್ರಾಮಗಳಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಗೆ ತುಂಬಿದ ಹಳ್ಳಗಳು ಅಡ್ಡಿಯಾದ ಘಟನೆಯೂ ನಡೆದಿದೆ. ಸಿರುಗುಪ್ಪ, ಬಳ್ಳಾರಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಕತ್ತಲಲ್ಲೇ ಕಾಲಕಳೆಯುವಂತಾಗಿದೆ.

ಜನ, ಜಾನುವಾರುಗಳ ಸ್ಥಿತಿ ಅಧೋಗತಿಯಾಗಿದ್ದು, ಕೂಡಲೇ ಜಿಲ್ಲಾಡಳಿತ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಕಂದಾಯ ಇಲಾಖೆ, ತೋಟಗಾರಿಕೆ, ಕೃಷಿ, ಜೆಸ್ಕಾಂ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್‌, ಗ್ರಾಮ ಲೆಕ್ಕಾ ಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾ ಧಿಕಾರಿಗಳು ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ತುಂಗಭದ್ರ ರೈತ ಸಂಘದ ಟಿ.ರಂಜಾನ್‌ ಸಾಬ್‌, ಗಂಗಾವತಿ ವಿರೇಶ್‌, ಸಣ್ಣಮಲ್ಲಪ್ಪ, ಜಾಲಿಹಾಳ್‌ ಶ್ರೀಧರಗೌಡ, ಶಾನವಾಸಪುರ ಶರಣಗೌಡ, ಶ್ರೀಧರಗಡ್ಡೆ ವೀರನಗೌಡ, ದರೂರು ಕ್ಯಾಂಪ್‌ ವೀರಭದ್ರರಾವ್‌, ಮುಷ್ಟಗಟ್ಟೆ ಭೀಮನಗೌಡ, ಕುರುಬರ ಸಿದ್ದಪ್ಪ, ಶೆಕ್ಷಾವಲಿ, ದೊಡ್ಡದಾಸಪ್ಪ, ಚಂದ್ರಶೇಖರ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next