Advertisement
ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿ 5 ವಿವಿಧ ಪ್ರಮುಖ ಕೌಶಲ್ಯಯುತ ಕೋರ್ಸ್‌ಗಳ ತರಬೇತಿಯನ್ನು ಸ್ವ-ಶಕ್ತಿ ಯೋಜನೆ ಅಡಿ ನಿರುದ್ಯೋಗಿ ಯುವಜನರಿಗೆ ನೀಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸುವುದಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದಕ್ಕೆ ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಎಂದು ಹೆಸರಿಡಲಾಗಿದೆ. ಮೊದಲ ಹಂತದಲ್ಲಿ ಸಂಡೂರು ತಾಲೂಕಿನಲ್ಲಿ ಬರುವ 26 ಗ್ರಾಪಂಗಳಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ತರಬೇತಿ ಸಂಪೂರ್ಣ ಉಚಿತವಾಗಿದೆ. ಆಧಾರ್‌ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣಪತ್ರ (ಎಸ್ಸಿ/ ಎಸ್ಟಿಗೆ ಮಾತ್ರ), ಬ್ಯಾಂಕ್ ಖಾತೆಯ ವಿವರ ಹಾಗೂ ಭಾವಚಿತ್ರ ಸಹಿತ ಇತ್ತೀಚಿನ ಪಾಸ್ ಪೋರ್ಟ್ ಸೈಜಿನ 2 ಭಾವಚಿತ್ರಗಳೊಂದಿಗೆ ತರಬೇತಿ ಪಡೆಯಲು ಆಸಕ್ತಿಯಿರುವವರು ತಮ್ಮ ಗ್ರಾಪಂಗಳಲ್ಲಿ ಹೆಸರು ನೋಂದಾಯಿಸಬಹುದು.
60 ರಷ್ಟು ಹಾಜರಾತಿ ಇದ್ದ ಫಲಾನುಭವಿಗಳಿಗೆ ಮಾತ್ರ ತರಬೇತಿ ಭತ್ಯೆ ನೀಡಲಾಗುತ್ತದೆ ಮತ್ತು ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಆದ್ಯತೆಯನ್ನಾಗಿ ಪರಿಗಣಿಸಿ ತರಬೇತಿ ನೀಡಲಾಗುತ್ತದೆ. ಸಂಡೂರು ಸ್ವಯಂ-ಶಕ್ತಿ ಯೋಜನೆ ಹೆಸರಿನಲ್ಲಿ ನೀಡಲಾಗುವ ವಿವಿಧ ಕೌಶಲ್ಯ ತರಬೇತಿಗಳ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಡಿ. 24ರಂದು ಬೆಳಗ್ಗೆ 10ಕ್ಕೆ ಸಂಡೂರು ತಾಲೂಕಿನ ವಿಠ್ಠಲಾಪುರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಚಾಲನೆ ನೀಡಲಾಗುತ್ತದೆ. ಡಿ.24ರಿಂದ ಜ. 8ರವರೆಗೆ ಸಂಡೂರು ತಾಲೂಕಿನ ಪ್ರತಿ ಗ್ರಾಪಂವಾರು ಈ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಇದರಲ್ಲಿ ನೋಂದಣಿಯಾದ ಅಭ್ಯರ್ಥಿಗಳನ್ನು ಅವರ ಆಸಕ್ತಿಗನುಗುಣವಾಗಿ ಅವರ ಗ್ರಾಪಂ ವ್ಯಾಪ್ತಿಯಲ್ಲಿಯೇ (5ಕಿ.ಮೀ ಮೀರದಂತೆ) ತರಬೇತಿ ನೀಡಲಾಗುತ್ತದೆ. ಜನವರಿ ಮೊದಲ ವಾರದಿಂದ ಈ ತರಬೇತಿಗಳು ಆರಂಭವಾಗಲಿವೆ ಎಂದು ಜಿಲ್ಲಾ ಧಿಕಾರಿ ನಕುಲ್ ತಿಳಿಸಿದ್ದಾರೆ.