ಬಳ್ಳಾರಿ: ಸಿದ್ದರಾಮಯ್ಯ ಕಳೆದ ಚುನಾವಣೆಯ ಗುಂಗಿನಲ್ಲಿದ್ದಾರೆ. ಅವರ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ಕೊಡಬೇಕಾಗತ್ತದೆ. ಕೇಂದ್ರದವರು ಕರ್ನಾಟಕಕ್ಕೆ ಏನೂ ಮಾಡಿಲ್ಲ ಎನ್ನುತ್ತಿದ್ದಾರೆ. ಸಾರ್ವಜನಿಕ ವೇದಿಕೆಗೆ ಬನ್ನಿ ಚರ್ಚೆ ಮಾಡಿ, ನಿಮ್ಮ ಸುಳ್ಳಿಗೆ ಫುಲ್ ಸ್ಟಾಪ್ ಹಾಕುತ್ತೇವೆ ಎಂದು ಮಾಜಿ ಸಿಎಂ ಸದಾನಂದಗೌಡ ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಮೋದಿವರನ್ನು ಅವಹೇಳನ ಮಾಡುವುದನ್ನ ಬಿಟ್ಟು ಬೇರೆ ಮಾತನಾಡುತ್ತಿಲ್ಲ. ಕೆಂದ್ರದ ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಕಾನೂನು ಸುವ್ಯವಸ್ಥೆ ನೋಡಿ. ರಾಜ್ಯದಲ್ಲಿ ಕುಕ್ಕರ್ ನಿಂದ ಹಿಡಿದು ಹೋಟೆಲ್ ವರೆಗೂ ಬ್ಲಾಸ್ಟ್ ಆಗಿದೆ. ಜನ ಇದನ್ನು ತುಲನೆ ಮಾಡಿ ನೋಡುತ್ತಾರೆ ಎಂದರು.
ಈ ಬಾರಿ ದೇಶವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಚುನಾವಣೆ. ಸಾಧನೆ ಆಧಾರದಲ್ಲಿ ಎರಡನೆ ಚುನಾವಣೆಯಲ್ಲಿ ಜನ ಬೆಂಬಲ ಸಿಕ್ಕಿದೆ. ಕಳೆದ ಚುನಾವಣೆಯ ಪ್ರಣಾಳಿಕೆಯಲ್ಲಿ ಹೇಳಿದ ಹಾಗೆ ಶ್ರೀರಾಮ ಮಂದಿರ ಸೇರಿ ಎಲ್ಲವನ್ನು ಈಡೇರಿಸಿದ್ದೇವೆ. ಮೋದಿ ಅವರ ಕ್ಯಾಬಿನೆಟ್ ನ ಒಬ್ಬ ಸಚಿವನ ಮೇಲೆ ಕಪ್ಪು ಚುಕ್ಕೆ ಇಲ್ಲ. ಟೆರರಿಸಂ, ನಕ್ಸಲಿಸಂ ನಿಯಂತ್ರಣ ಮಾಡಲಾಗಿದೆ ಎಂದು ಸದಾನಂದ ಗೌಡ ಹೇಳಿದರು.
ಉಪ್ಪು ತಿಂದವರು ನೀರು ಕುಡಿಯಲಿ
ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಹೆಚ್ಚು ಪ್ರಭಾವ ಬೀರಲ್ಲ. ನನಗೆ ಹಚ್ಚಿನ ಮಾಹಿತಿ ಇಲ್ಲ, ಹೀಗಾಗಿ ಅಷ್ಟೊಂದು ಮಾತನಾಡಲಾರೆ. ಆದರೆ ಕಾಂಗ್ರೆಸ್ ನವರು ಅದನ್ನೇ ದೊಡ್ಡ ವಿಷಯ ಮಾಡುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲಿ ಎಂದಿದ್ದಾರೆ, ನಾನು ಹಾಗೆ ಹೇಳುವೆ. ತನಿಖೆ ನಡೆಯುತ್ತಿರುವುದರಿಂದ ನಾನು ಹೆಚ್ಚು ಕಾಮೆಂಟ್ ಮಾಡಲ್ಲ ಎಂದರು.
ಹಳೆ ಮೈಸೂರು ಭಾಗದಲ್ಲಿ ನಮಗೆ ಸ್ವಲ್ಪ ಹಿನ್ನೆಡೆಯಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ಈಗ ಸದ್ದು ಮಾಡಿದಷ್ಟು ಆ ಭಾಗದ ಚುನಾವಣೆ ಮುನ್ನ ಸದ್ದು ಮಾಡಿದ್ದರೆ ಹಿನ್ನೆಡೆಯಾಗುತ್ತಿತ್ತು.. ಅವರ ದೋಸ್ತಿ ಮಾಡಿದ ನಮಗೂ ಹಿನ್ನಡೆಯಾಗ್ತಿತ್ತು. ಹೀಗಾಗಿ ಸದ್ಯ 14 ಕ್ಷೇತ್ರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸದಾನಂದಗೌಡರು ಹೇಳಿದರು.