Advertisement

ನಿಯಮ ಉಲಂಘಿಸಿದ್ರೆ ಪ್ರಕರಣ ದಾಖಲು

01:40 PM Jun 25, 2020 | Naveen |

ಬಳ್ಳಾರಿ: ಉದ್ದೇಶ ಪೂರ್ವಕವಾಗಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎ.ಮಂಜುನಾಥ ತಿಳಿಸಿದ್ದಾರೆ.

Advertisement

ಕೋವಿಡ್‌-19 ಹರಡಿರುವ ವ್ಯಕ್ತಿಗಳು ಹಾಗೂ ಅವರ ಸಂಪರ್ಕ ಹೊಂದಿದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್‌ ಹಾಗೂ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಆ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಕ್ವಾರಂಟೈನ್‌ ಪ್ರದೇಶದಿಂದ ಬೇರೆ ಕಡೆಗೆ ಚಲನವಲನ ಮಾಡುವುದಾಗಲಿ ಅಥವಾ ಮೊಬೈಲ್‌ಗ‌ಳನ್ನು ಸ್ವಿಚ್‌ಆಫ್‌ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಐಪಿಸಿ ಸೆಕ್ಷನ್‌ 188ರ ಅನ್ವಯ ಎಫ್‌ ಐಆರ್‌ ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿರುವ ಅವರು, ಸಾಂಕ್ರಮಿಕ ಪಿಡುಗಾದ ಕೋವಿಡ್ ತಡೆಗಟ್ಟಲು ಸರ್ಕಾರ ಕೋವಿಡ್‌-19 ಕ್ವಾರಂಟೈನ್‌ ಅಲರ್ಟ್‌ ಸಿಸ್ಟಮ್‌ ಪ್ರಾರಂಭಿಸಿದ್ದು, ಈ ವ್ಯವಸ್ಥೆಯಡಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗಿರುತ್ತದೆ. ಈ ವ್ಯಕ್ತಿಗಳ ಮೊಬೈಲ್‌ ನಂಬರ್‌ ನೆಟ್‌ ವರ್ಕ್‌ ಆಧಾರದ ಮೇಲೆ ಕ್ವಾರಂಟೈನ್‌ನಿಂದ ಹೊರಗೆ ಬರದಂತೆ ನಿಗಾವಹಿಸಲು ಅವರ ಚಲನವಲನಗಳನ್ನು ಗಮನಿಸಲಾಗುತ್ತದೆ ಎಂದಿದ್ದಾರೆ.

ಒಂದು ವೇಳೆ ಕ್ವಾರಂಟೈನ್‌ ಮಾಡಲಾಗಿರುವ ವ್ಯಕ್ತಿಗಳು ತಮ್ಮ ಕ್ವಾರಂಟೈನ್‌ ಪ್ರದೇಶ ವ್ಯಾಪ್ತಿಯನ್ನು ಮೀರಿದ್ದಲ್ಲಿ ಹಾಗೂ ತಮ್ಮ ಮೊಬೈಲ್‌ ಸ್ವಿಚ್‌ಆಫ್‌ ಮಾಡಿದಲ್ಲಿ ಎಚ್ಚರಿಕೆ ಸಂದೇಶವು ರಾಜ್ಯ ಸಮೀಕ್ಷಾ ಘಟಕದ ಮೂಲಕ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಬರುತ್ತದೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕ್ವಾರಂಟೈನ್‌ ಉಲ್ಲಂಘಿ ಸಿದ ಹಾಗೂ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್‌ ನಲ್ಲಿರುವಂತೆ ನಿಯಂತ್ರಿಸಲಾಗುತ್ತದೆ. ಆದರೂ ಸಹ ಕ್ವಾರಂಟೈನ್‌ ಇದ್ದವರು ಮನೆಯಿಂದ ಬೇರೆ ಕಡೆಗೆ ಚಲನ ವಲನ ಮಾಡುತ್ತಿರುವುದನ್ನು ಗಮನಿಸಿ ಅವರಿಗೆ ನೋಟಿಸನ್ನು ನೀಡಲಾಗುವುದು, ಇದೇ ರೀತಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next