Advertisement

ಪ್ರತಿ ತಿಂಗಳು ಗುರಿ ಸಾಧಿಸದಿದ್ದಲ್ಲಿ ಕ್ರಮ: ಸುಧಾಕರ್‌

01:44 PM Jun 13, 2020 | Naveen |

ಬಳ್ಳಾರಿ: ವಿಮ್ಸ್‌ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಟಾರ್ಗೆಟ್‌ ಫಿಕ್ಸ್‌ ಮಾಡಲಾಗುವುದು. ನಿಗದಿಪಡಿಸಿದ ಗುರಿ ಸಾಧಿಸದಿದ್ದರೇ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಎಚ್ಚರಿಕೆ ನೀಡಿದರು.

Advertisement

ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಭಾಂಗಣದಲ್ಲಿ ನಡೆದ ವಿಮ್ಸ್‌ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೋವಿಡ್‌ನ‌ಲ್ಲಿ ಬಿಜಿಯಾಗಿದ್ದ ಕಾರಣ ಈ ಕಡೆ ಸರಿಯಾಗಿ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಹಾಗಾಗುವುದಕ್ಕೆ ಬಿಡುವುದಿಲ್ಲ. ಸಂಸ್ಥೆಯ ನಿರ್ದೇಶಕರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಎಚ್ಚೆತ್ತುಕೊಂಡು ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ನಿರ್ದೇಶಕರಿಗೆ ಸೂಚನೆ: ಬಳ್ಳಾರಿ ವಿಮ್ಸ್‌ ಪ್ರತಿನಿತ್ಯ 2,500ಕ್ಕೂ ಹೆಚ್ಚು ಹೊರರೋಗಿಗಳು ಹಾಗೂ 1 ಸಾವಿರದಷ್ಟು ಜನ ಒಳರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಎಬಿಆರ್‌ಕೆ ಹಣ ಪಡೆಯುವಲ್ಲಿ ತೀರಾ ಹಿಂದುಳಿದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಸುಧಾಕರ್‌ ಅವರು, ಮಂಗಳೂರಿನ ಖಾಸಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ 1200 ಹೊರರೋಗಿಗಳು ಹಾಗೂ 600 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ವಾರ್ಷಿಕವಾಗಿ 46 ಕೋಟಿ ರೂ. ಎಬಿಆರ್‌ ಕೆ ಹಣ ಪಡೆಯುತ್ತಿದೆ. ಆದರೆ, ವಿಮ್ಸ್‌ ಮಾತ್ರ ಬರೀ 49 ಲಕ್ಷ ರೂ. ಪಡೆದಿರುವುದು ಸರಿಯಲ್ಲ. ಕನಿಷ್ಠ ಏನಿಲ್ಲವೆಂದರೂ 100 ಕೋಟಿ ರೂ. ಪಡೆಯಬೇಕು. ಆ ಹಣ ಬಂದ್ರೇ ವಿಮ್ಸ್‌ನಲ್ಲಿ ಇನ್ನಷ್ಟು ಸುಧಾರಣೆ ಕೈಗೊಳ್ಳಬಹುದು. ಪ್ರತಿವಾರ ಈ ವಿಷಯದಲ್ಲಿ ನಿರ್ದೇಶಕರು ನಿಗಾವಹಿಸಬೇಕು ಎಂದು ಸೂಚಿಸಿದರು.

15ಕ್ಕೆ ಟ್ರಾಮಾಕೇರ್‌ ಸೆಂಟರ್‌ ಉದ್ಘಾಟನೆ: ಬಳ್ಳಾರಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾಕೇರ್‌ ಸೆಂಟರ್‌ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ಜು.15ರಂದು ಇದನ್ನು ಉದ್ಘಾಟಿಸಲಾಗುವುದು ಎಂದು ಸಚಿವ ಸುಧಾಕರ್‌ ಹೇಳಿದರು.

ಔಷಧಿ ಸರಬರಾಜು ಮಾಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆ ಮಾಡುವುದಕ್ಕೆ ಪರಿಶೀಲಿಸಿ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ| ಗಿರೀಶ್‌ ಅವರಿಗೆ ಸೂಚಿಸಿದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಹಂತವಾರು ಪ್ರಗತಿ ನೋಡಿಕೊಂಡು ಹಾಗೂ ಡಿಎಂಇ ಒಪ್ಪಿಗೆ ಒಡೆದು ಹಣ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು. ವಿಮ್ಸ್‌ ನಲ್ಲಿ ಹಾಜರಾತಿ ಖಾಸಗಿ ಕ್ಲಿನಿಕ್‌ಅನ್ನು ವೈದ್ಯರು ನಡೆಸುತ್ತಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಗರಂ ಆದ ಸಚಿವರಾದ ಸುಧಾಕರ್‌ ಮತ್ತು ಆನಂದಸಿಂಗ್‌ ಅವರು, ಆ ಪಟ್ಟಿ ನೀಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಸೋಮಶೇಖರ್‌ ರೆಡ್ಡಿ, ಅಲ್ಲಂ ವೀರಭದ್ರಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ| ಗಿರೀಶ್‌, ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌, ವಿಮ್ಸ್‌ ನಿರ್ದೇಶಕ ಡಾ| ದೇವಾನಂದ ಇದ್ದರು.

Advertisement

ವಿಮ್ಸ್‌ನಲ್ಲಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವುದಕ್ಕೆ ಸಂಬಂಧಿ ಸಿದಂತೆ ಕೋರ್ಟ್‌ನಲ್ಲಿ ಇರುವ ತಡೆಯಾಜ್ಞೆ ತೆರವುಗೊಳಿಸಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ಈ ಕುರಿತು ಗಮನ ಹರಿಸುವಂತೆ ವಿಮ್ಸ್‌ ನಿರ್ದೇಶಕರಿಗೆ ಸಚಿವ ಸುಧಾಕರ್‌ ಸೂಚಿಸಿದರು. ವಿಮ್ಸ್‌ ಸುಸಜ್ಜಿತವಾಗಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳು ಬೇಕೋ ಅವುಗಳನ್ನು ಎರಡ್ಮೂರು ತಿಂಗಳಲ್ಲಿ ಕೈಗೊಳ್ಳಲಾಗುವುದು. ಒಟ್ಟಿನಲ್ಲಿ ಸುಸಜ್ಜಿತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next