ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ಆರೆಂಜ್ ಜೋನ್‌ನಲ್ಲಿದೆ ಎಂದು ಉದಾಸೀನತೆ ತೋರುವುದು ಬೇಡ. ಇನ್ನುಮುಂದೆಯೂ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ಪಾಲಿಕೆ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಸದ್ಯ ಆರು ಇದ್ದು, ಬಳ್ಳಾರಿ ಜಿಲ್ಲೆ ಆರೇಂಜ್ ಜೋನ್‌ನಲ್ಲಿ ಬಂದಿರಬಹುದು. ಹಾಗಂತ ವೈರಸ್‌ನ್ನು ನಿರ್ಲಕ್ಷ್ಯ ವಹಿಸುವುದು ಬೇಡ. ವೈರಸ್ ನಿಯಂತ್ರಣಕ್ಕೆ ಈ ಮೊದಲಿಗಿಂತಲೂ ಹೆಚ್ಚು ಕಠಿಣ ಕ್ರಮಕೈಗಳನ್ನು ಕೈಗೊಂಡರೂ ಒಳ್ಳೆಯದು. ಜಿಲ್ಲೆ ರೆಡ್ ಜೋನ್‌ನಲ್ಲಿದೆ ಎಂಬ ಭಾವನೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಅಂತರವನ್ನು ಸದ್ಯದ ಮಟ್ಟಿಗೆ ಮಾತ್ರವಲ್ಲದೇ ಮುಂದಿನ ದಿನಗಳಲ್ಲೂ ಕಾಯ್ದುಕೊಂಡರೂ ಒಳ್ಳೆಯದು ಎಂದು ತಿಳಿಸಿದರು.
ಎರಡನೇ ಹಂತದ ಲಾಕ್‌ಡೌನ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ಆಯುಕ್ತರು, ಆರೋಗ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು, ಹಣಕಾಸು ಅಧಿಕಾರಿಗಳು, ಇಂಜಿನೀಯರ್‌ಗಳು ಸೇರಿ ಸಿಬ್ಬಂದಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಎಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ದೇವರ ಕೃಪೆಯಿಂದ ಆರು ಪಾಸಿಟಿವ್ ಗಳು ಸಹ ನೆಗೆಟಿವ್ ಬರಬಹುದು ಎಂಬ ನನ್ನ ಆಶಾಭಾವನೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪೌರಕಾರ್ಮಿಕರು ಮಾಡುತ್ತಿರುವ ಕೆಲಸಕ್ಕೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಅವರ ಸೇವೆಯನ್ನು ಶ್ಲಾಘಿಸಿದರು. ಪಾಲಿಕೆ ವ್ಯಾಪ್ತಿಯ ಕುಡಿವ ನೀರಿನ ಕರ ವಸೂಲಿಯನ್ನು ಪಾವತಿಸಲೇಬೇಕು ಎಂದು ಒತ್ತಾಯಿಸಲ್ಲ. ಆದರೆ, ಪಾಲಿಕೆ ನಡೆಸಲು ನೀರಿನ ಕರದ ಅವಶ್ಯಕತೆಯೂ ಇದೆ. ಹಾಗಾಗಿ ಉಳ್ಳವರು, ಶ್ರೀಮಂತರು ನೀರಿನ ಕರ ಪಾವತಿಸಲು ಮುಂದೆ ಬರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ ಶಾಸಕ ಜಿ.ಸೋಮಶೇಖರ ರೆಡ್ಡಿಯವರು, ಪಾಲಿಕೆ ವ್ಯಾಪ್ತಿಯ ವಸತಿಗಳ ಕೆಇಬಿ ಮೀಟರ್ ಗಳು ಮತ್ತು ನೀರಿನ ಸಂಪರ್ಕ ಎರಡೂ ಟ್ಯಾಲಿಯಾಗುವಂತೆ ಇಂಜಿನೀಯರಿಂಗ್ ವಿಭಾಗ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮುನ್ನ ಪಾಲಿಕೆ ಸಭಾಂಗಣದಲ್ಲಿ ನಡೆದ ಅಧಿ ಕಾರಿಗಳ ಸಭೆಯಲ್ಲಿ ಪೌರಕಾರ್ಮಿಕರ ಆರೋಗ್ಯ ಸಪಾಸಣೆ ಮಾಡಲಾಗಿದೆ. ಫೀವರ್ ಕ್ಲೀನಿಕ್ ತೆರೆದಿರುವ ಕುರಿತು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಪಾಲಿಕೆ ಆಯುಕ್ತೆ ತುಷಾರಮಣಿ, ಪಾಲಿಕೆ ಸದಸ್ಯ ಮೋತ್ಕರ್ ಶ್ರೀನಿವಾಸ್, ಕೆಎಂಎಫ್ ನಿರ್ದೇಶಕ ವೀರಶೇಖರರೆಡ್ಡಿ, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.