ಬಳ್ಳಾರಿ: ಕೋವಿಡ್-19 ಹಿನ್ನೆಲೆ ಲಾಕ್ ಡೌನ್ ಅವಧಿಯಲ್ಲಿ ಸ್ವಯಂ ಸೇವಕರು ಸಲ್ಲಿಸುತ್ತಿರುವ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, ಇದನ್ನು ಮೇ 3ರವರೆಗೆ ಮುಂದುವರಿಸಿಕೊಂಡು ಹೋಗುವುದರ ಜತೆಗೆ ಜಿಲ್ಲಾಡಳಿತ ಆರಂಭಿಸಿರುವ ತಾತ್ಕಾಲಿಕ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಕೌನ್ಸೆಲಿಂಗ್ ಮಾಡುವುದರ ಮೂಲಕ ಅವರಲ್ಲಿ ಮನೋಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾ. ಅರ್ಜುನ್ ಮಲ್ಲೂರ್ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರೊಂದಿಗೆ ಎನ್ ಜಿಒಗಳು ಹಾಗೂ ಸ್ವಯಂ ಸೇವಕರು ಹಾಗೂ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್‌ರೊಂದಿಗೆ ಶುಕ್ರವಾರ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಎನ್‌ಜಿಒ ಪ್ರತಿನಿಧಿಗಳು, ರೆಡ್‌ಕ್ರಾಸ್
ಸ್ವಯಂ ಸೇವಕರು, ಕೊರೊನಾ ವಾರಿಯರ್ಸ್ಗಳು ಸಲ್ಲಿಸುತ್ತಿರುವ ಸೇವಾ ಕಾರ್ಯ ಹಾಗೂ ಜಿಲ್ಲಾಡಳಿತಕ್ಕೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿರುವುದನ್ನು ಶ್ಲಾಘಿಸಿದರು.
ತಮ್ಮ ಸೇವಾ ಕಾರ್ಯ ಇದೇ ರೀತಿ ಮುಂದುವರಿಯಲಿ ಮತ್ತು ಜಿಲ್ಲಾಡಳಿತದೊಂದಿಗೆ ಇದೇ ರೀತಿ ತಮ್ಮ ಸಂಬಂಧವಿರಲಿ ಎಂದು ಕೋರಿದರು. ವೈದ್ಯಕೀಯ ತುರ್ತು ಪ್ರಕರಣಗಳಿದ್ದಲ್ಲಿ ಮಾತ್ರ ತೆರಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದ ಡಿಸಿ ನಕುಲ್ ಅವರು, ಜನ್‌ಧನ್ ಹಣ ಪಡೆಯಲು ಜನರು ಬ್ಯಾಂಕ್‌ಗಳ ಮುಂದೆ ನಿಲ್ಲುತ್ತಿದ್ದು, ಸಾಮಾಜಿಕ ಅಂತರ ಸರಿಯಾಗಿ ಪಾಲನೆಯಾಗುತ್ತಿಲ್ಲ ಎಂಬ ದೂರುಗಳಿವೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರತಿ ಬ್ಯಾಂಕ್ ಶಾಖೆಗೆ ಇಬ್ಬರು ಸ್ವಯಂ ಸೇವಕರನ್ನು ಸಾಮಾಜಿಕ ಅಂತರ ಪರಿಪಾಲಿಸುವುದಕ್ಕೆ ನಿಗಾವಹಿಸುವುದಕ್ಕಾಗಿ ನಿಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಶಕೀಬ್, ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಪ್ಪ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಇದ್ದರು.