ಬಳ್ಳಾರಿ: ದುಡಿಯಲೆಂದು ಮಕ್ಕಳು-ಮರಿಗಳೊಂದಿಗೆ ನೆರೆಯ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಗೆ ಹೋಗಿದ್ದ ಸಿರುಗುಪ್ಪ ತಾಲೂಕು ರಾರಾವಿ ಗ್ರಾಮದ ನಿವಾಸಿಗಳು, ಅಲ್ಲಿಯೇ ಲಾಕ್‌ಡೌನ್ ಆಗಿದ್ದು, ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ.
ಸಿರುಗುಪ್ಪ ತಾಲೂಕು ರಾರಾವಿ ಗ್ರಾಮದ ಹಲವಾರು ಜನರು ತಮ್ಮ ಮಕ್ಕಳು, ಮರಿಗಳೊಂದಿಗೆ ನೆರೆಯ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಗೆ ದುಡಿಯಲೆಂದು ವಲಸೆ ಹೋಗಿದ್ದರು. ಆದರೆ, ಕೇಂದ್ರ ಸರ್ಕಾರ ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ವಿಧಿಸಿರುವ ಪರಿಣಾಮ ಅಲ್ಲಿಯೇ ಲಾಕ್ ಡೌನ್ ಆಗಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿಮೀ ದೂರದ ಹೊರವಲಯದ ಹೊಲದಲ್ಲಿ ಟೆಂಟ್‌ಗಳಲ್ಲಿ ಉಳಿದುಕೊಂಡಿರುವ ಇವರಿಗೆ ದುಡಿಯಲು ಕೆಲಸವಿಲ್ಲದೆ, ತಿನ್ನಲು ಒಂದು ಹೊತ್ತಿಗೆ ಊಟವೂ ಸಿಗದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮನ್ನು ಊರಿಗೆ ಕರೆದೊಯ್ಯುವಂತೆ ಬಳ್ಳಾರಿ ಜಿಲ್ಲಾಡಳಿತಕ್ಕೆ ವಲಸೆ ಕಾರ್ಮಿಕರು ಮನವಿ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ದುಡಿಯಲೆಂದು ದೂರದ ಪ್ರಕಾಶಂ ಜಿಲ್ಲೆಗೆ ಮಕ್ಕಳು ಮರಿಗಳೊಂದಿಗೆ ಬಂದಿದ್ದೇವೆ. ಇದ್ದ ದವಸ ಧಾನ್ಯಗಳು ಎಲ್ಲವೂ ಖಾಲಿಯಾಗಿದೆ. ಊರೊಳಗೆ ಹೋದರೆ ಕರೆದುಕೊಳ್ಳುತ್ತಿಲ್ಲ. ಎಲ್ಲೂ ಹೋಗುವಂತಿಲ್ಲ. ಅನ್ನ, ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ದೊಡ್ಡವರು ಹೇಗೋ ಇರುತ್ತೇವೆ. ಆದರೆ, ಮಕ್ಕಳನ್ನು ಸುಧಾರಿಸುವುದು ಹೇಗೆ ಎಂಬ ಚಿಂತೆ ನಮ್ಮನ್ನು ಕಾಡುತ್ತಿದೆ. ಇಲ್ಲಿ ವಿಷ ಜಂತುಗಳು ಹೆಚ್ಚಾಗಿದ್ದು, ಅಂಗೈಯಲ್ಲಿ ಜೀವ ಹಿಡಿದು ಬದುಕುತ್ತಿದ್ದೇವೆ. ಹಾಗಾಗಿ ಹೇಗಾದರೂ ಮಾಡಿ ನಮ್ಮನ್ನು ನಮ್ಮೂರಿಗೆ ಹೋಗುವಂತೆ ಮಾಡಿ ಎಂದು ವೀಡಿಯೋದಲ್ಲಿ ಬಳ್ಳಾರಿ ಜಿಲ್ಲಾಡಳಿತಕ್ಕೆ ಅಳಲು ತೋಡಿಕೊಂಡಿದ್ದಾರೆ.