ಬಳ್ಳಾರಿ: ಜಿಲ್ಲಾ ಖನಿಜ ನಿಧಿ ಅಡಿ ಸಂಡೂರು ಸ್ವಯಂ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ನೀಡಲಾಗಿರುವ ಹೊಲಿಗೆ ತರಬೇತಿ ಈ ಕೋವಿಡ್ ಹೊತ್ತಲ್ಲಿ ಸದುಪಯೋಗಕ್ಕೆ ಬರುತ್ತಿದೆ. ತರಬೇತಿ ಪಡೆದ ಮಹಿಳೆಯರು ಮಾಸ್ಕ್ ತಯಾರಿಸುತ್ತಿದ್ದು, ಖರೀದಿಗೆ ಕೈಗಾರಿಕೆಗಳು ಮುಂದೆ ಬಂದಿರುವುದು ವಿಶೇಷ. ಮಹಿಳಾ ಗುಂಪು ಮತ್ತು ಕೈಗಾರಿಕೆಗಳ ಮಧ್ಯೆ ಸಂಪರ್ಕ ಒದಗಿಸಿದ್ದು ಜಿಲ್ಲಾಡಳಿತ!.
ಸಂಡೂರು ಸ್ವಯಂ ಶಕ್ತಿ ಯೋಜನೆ ಹೆಸರಿನಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ಸಂಡೂರಿನ ಭುಜಂಗನಗರ ಮತ್ತು ವಿಠ್ಠಲಾಪುರದ 176 ಮಹಿಳೆಯರಿಗೆ ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಒದಗಿಸಲಾಗಿತ್ತು. ಅವರಿಗೆ ಕೊರೊನಾ ಸಂದರ್ಭದಲ್ಲಿ ಮರುಬಳಕೆ ಮಾಡಬಹುದಾದ ಮಾಸ್ಕ್ಗಳ ತಯಾರಿಕೆ ಮಾಡಲು ತಿಳಿಸಲಾಗಿದ್ದು, ಅವರಿಗೆ ಮಾಸ್ಕ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು ಜಿಲ್ಲಾಡಳಿತದಿಂದ ಒದಗಿಸಲಾಗಿದೆ. ಕಚ್ಚಾ ವಸ್ತು ಮತ್ತು ಮಾಸ್ಕ್ಹೊ ಲಿಯುವುದಕ್ಕೆ ಬೇಕಾದ ಕೂಲಿ ಸೇರಿ ಪ್ರತಿ ಮಾಸ್ಕ್ಗೆ ಇಂತಿಷ್ಟು ದರ ನಿಗದಿಪಡಿಸಲಾಗಿದೆ. ಎರಡು ದಿನಗಳಿಂದ ಮಹಿಳೆಯರು ಈ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.
ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಕೈಗಾರಿಕಾ ಕೇಂದ್ರವು ಮಹಿಳಾ ಗುಂಪುಗಳು ಮತ್ತು ಕಾರ್ಖಾನೆಗಳನ್ನು ಸಂಪರ್ಕಿಸಿ ಮಾಸ್ಕ್ ಪೂರೈಕೆಗೆ ಲಿಂಕ್ ಒದಗಿಸಿದೆ. ಈಗಾಗಲೇ ಎಸಿಸಿ ಸಿಮೆಂಟ್ ಕಂಪನಿ 3 ಸಾವಿರ ಮಾಸ್ಕ್ ಗಳನ್ನು, ಜಹಿರಾಜ್ ಇಸ್ಪಾತ್ ಐದುನೂರು ಮತ್ತು ಹೋತೂರು ಸ್ಟೀಲ್ ಇನ್ನೂರು ಮಾಸ್ಕ್ಗಳನ್ನು ಒದಗಿಸುವಂತೆ ಸಂಡೂರು ಸ್ವಯಂ ಶಕ್ತಿ ಯೋಜನೆಯ ಮಹಿಳೆಯರಲ್ಲಿ ಕೇಳಿಕೊಂಡಿದ್ದು, ಮಾಸ್ಕ್ಗಳ ತಯಾರಿಕೆ ಕೆಲಸ ಭರದಿಂದ ಸಾಗಿದೆ. ಇನ್ನೂ ಹೆಚ್ಚಿನ ಕಾರ್ಖಾನೆಗಳನ್ನು ಹಾಗೂ ಮಹಿಳಾ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಲಾಗಿದ್ದು, ಇನ್ನೂ ಹೆಚ್ಚಿನ ಕಾರ್ಖಾನೆಗಳು ಮುಂದೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಈ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವುದು ಇದರ ಹಿಂದಿನ ಉದ್ದೇಶ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್ ತಿಳಿಸಿದ್ದಾರೆ.
ಸಂಡೂರು ಸ್ವಯಂ ಶಕ್ತಿ ಯೋಜನೆ ಅಡಿ 1080 ಮಹಿಳೆಯರಿಗೆ ತರಬೇತಿ ನೀಡಬೇಕಿದ್ದು, ಕೋವಿಡ್ ಹಿನ್ನೆಲೆಯಲ್ಲಿ ನೀಡಲಾಗಿಲ್ಲ. ಅವರಿಗೂ ಮುಂದಿನ ದಿನಗಳಲ್ಲಿ ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಡಿಎಂಎಫ್ ಅಡಿ ಒದಗಿಸಿ ಅವರಿಗೂ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.