Advertisement

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ತೆರೆ

03:20 PM Feb 03, 2020 | Naveen |

ಬಳ್ಳಾರಿ: ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆಗೆ ರಂಗಮಂದಿರದ ಪೈಲ್ವಾನ್‌ ರಂಜಾನ್‌ ಸಾಬ್‌ ವೇದಿಕೆಯಲ್ಲಿ ಅದ್ಧೂರಿಯಾಗಿ ಭಾನುವಾರ ಸಂಜೆ ತೆರೆಬಿತ್ತು.

Advertisement

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ವಾಧ್ಯಕ್ಷ ಡಾ| ಜೆ.ಎಂ.ನಾಗಯ್ಯ ಮಾತನಾಡಿ, 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿದ್ದರಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಕನ್ನಡ ಭಾಷೆ ಉಳಿಸಲು, ಅಭಿವೃದ್ಧಿಪಡಿಸಲು ಶ್ರಮಿಸುವುದರ ಜತೆಗೆ ಸಂಶೋಧನೆಯಲ್ಲಿ ಮತ್ತಷ್ಟು ತೊಡಗಿಸಿಕೊಂಡು ಬಳ್ಳಾರಿ ಜಿಲ್ಲೆಯ ಕೀರ್ತಿ ಮತ್ತಷ್ಟು ಹೆಚ್ಚಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಕಲ್ಯಾಣಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಸಾಹಿತಿಗಳಾದ ಜಚನ್ಯ ಮತ್ತು ಸಿದ್ದಯ್ಯಪುರಾಣಿಕ್‌ ಅವರ ಕೊಡುಗೆ ಅಪಾರವಾಗಿದೆ. ಜಚನ್ಯ ಅವರು ಕನ್ನಡ ಸಾಹಿತ್ಯಕ್ಕೆ 360 ಪುಸ್ತಕಗಳನ್ನು ನೀಡಿದ್ದಾರೆ. ಈ ಇಬ್ಬರು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು. ಆದರೆ, ಅಂದಿನ ದಿನಗಳಲ್ಲಿ ಅವರನ್ನು ಕೇವಲ ಲಿಂಗಾಯತರು ಎಂಬ ಕಾರಣಕ್ಕೆ ಅವರನ್ನು ಜ್ಞಾನಪೀಠ ಪ್ರಶಸ್ತಿಗೆ ಪರಿಗಣಿಸಲಿಲ್ಲ. ಆದರೂ, ಮೈಸೂರು ವಿವಿಯು ಜಚನ್ಯ ಅವರಿಗೆ ಗೌರವ ಡಾಕ್ಟರೇಟ್‌ ನೀಡಿತು. ಅಂದಿನ ದಿನಗಳಲ್ಲಿ ಗೌರವ ಡಾಕ್ಟರೇಟ್‌ಗೆ ಅಷ್ಟೊಂದು ಮಹತ್ವವಿದ್ದು, ಅದು ಸಹ ಇಂದಿನ ದಿನಗಳಲ್ಲಿ ಮಹತ್ವವನ್ನು ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜಕಾರಣಿಗಳು ಬರದಿದ್ದರೂ ಒಳ್ಳೆಯದು: ರೈತರಿಗೆ ಸಾಹಿತಿಗಳ ಬೆಂಬಲವಿದೆ. ರೈತರಿಗೆ ಸಾಹಿತಿಗಳು ಬೆನ್ನೆಲುಬಾಗಿ ಸದಾ ನಿಂತಿದ್ದಾರೆ. ಆದರೆ, ರೈತರಿಗೆ, ಸಾಹಿತಿಗಳಿಗೆ ರಾಜಕೀಯ ಮಂದಿಯ ಬೆಂಬಲ ಇರಲ್ಲ. ಕಾರಣ, ರಾಜಕಾರಣಿಗಳಿಗೆ ಕನ್ನಡಿಗರ ಓಟ್‌ ಬ್ಯಾಂಕ್‌ ಇಲ್ಲ. ಅವರಿಗೆ ಓಟ್‌ ಬ್ಯಾಂಕ್‌ ಲಭಿಸುವ ಜಾತಿ ಸಮಾವೇಶಗಳಿಗೆ ಹೋಗುತ್ತಾರೆ. ಕನ್ನಡ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದ ಸ್ವಾಮೀಜಿ, ಇಂಥಹ ಕಾರ್ಯಕ್ರಮಗಳಿಗೆ ರಾಜಕೀಯ ಮಂದಿ ಬಂದರೆ ಸಭಾಂಗಣ ಆಗಷ್ಟೇ ಭರ್ತಿಯಾಗಿ ಅವರು ಹೋಗುತ್ತಿದ್ದಂತೆ ಖಾಲಿಯಾಗಲಿದೆ.

ಕನ್ನಡದ ಮಕ್ಕಳಾದ ನಾವೆಲ್ಲರೂ ಕಾರ್ಯಕ್ರಮ ಮುಗಿಯುವವರೆಗೂ ಇರುತ್ತೇವೆ. ಹಾಗಾಗಿ ರಾಜಕಾರಣಿಗಳು ಇಂಥಹ ಕಾರ್ಯಕ್ರಮಕ್ಕೆ ಬಂದರೂ ಒಳ್ಳೆಯದು, ಬರದಿದ್ದರೂ ಒಳ್ಳೆಯದು ಎಂದು ಛೇಡಿಸಿದರು.

Advertisement

ಕನ್ನಡದಲ್ಲೇ ಸಹಿಮಾಡಿ: ಕನ್ನಡಿಗರಾದ ನಾವೆಲ್ಲರೂ ಇಂದಿನಿಂದ ಕನ್ನಡದಲ್ಲೇ ಸಹಿ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇಂಗ್ಲೀಷ್‌ನಲ್ಲಿ ಸಹಿ ಮಾಡಿದಾಕ್ಷಣದ ನಮಗೆಲ್ಲ ತಿಳಿದಿದೆ ಎಂಬ ಮನೋಭಾವ ಬೇಡ. ಕೇಂದ್ರ, ರಾಜ್ಯ ಸರ್ಕಾರ ಯಾವುದೇ ದಾಖಲೆಗಳು ಇದ್ದರೂ ಕನ್ನಡದಲ್ಲೇ ಸಹಿ ಮಾಡಿದರೆ ಅದಕ್ಕೆ ನ್ಯಾಯಾಲಯದ ಸಮ್ಮತಿಯೂ ಸಿಗಲಿದೆ. ಹಾಗಾಗಿ ಇಂದಿನಿಂದ ಕನ್ನಡಿಗರೆಲ್ಲರೂ ಕನ್ನಡದಲ್ಲೇ ಸಹಿ ಮಾಡುವುದನ್ನು, ಕನ್ನಡ ಪದಗಳನ್ನು ಬಳಸುವುದನ್ನು, ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಪೋಷಕರು ವೃದ್ಧಾಶ್ರಮಕ್ಕೆ ಸೇರಿಸಬಾರದು ಎಂದಾದರೆ ಎಲ್ಲರೂ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ಕನ್ನಡ ದೀಪ ಹಚ್ಚುವ ನಿಟ್ಟಿನಲ್ಲಿ, ಕನ್ನಡಿಗರನ್ನು ಎಚ್ಚರಿಸಲು, ಒಗ್ಗೂಡಿಸಲು ಸಮ್ಮೇಳನ ಆಯೋಜಿಸಲಾಗಿದೆ. ಕನ್ನಡ ಕೆಲಸಕ್ಕೆ ಪ್ರತಿಯೊಬ್ಬರ ಪ್ರೋತ್ಸಾಹ ಪ್ರಮುಖವಾಗಿದೆ. ಕನ್ನಡ ಕೇವಲ ಭಾಷೆಯಲ್ಲ, ಬದುಕಾಗಿದೆ. ಇದನ್ನು ಉಳಿಸಿ, ಬೆಳೆಸುವಲ್ಲಿ ಪ್ರತಿಯೊಬ್ಬರು ನಿರಂತರವಾಗಿ ಶ್ರಮಿಸಬೇಕು ಎಂದು ಕೋರಿದರು.

ವೀವಿ ಸಂಘದ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆ ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ ಎಂಬುದನ್ನು ಚಿಂತನೆ ನಡೆಸಬೇಕಿದೆ. ಕನ್ನಡದ ಅಳಿವು-ಉಳಿವು ನಮ್ಮ ಮೇಲಿದೆ. ಗ್ರಾಮೀಣ ಭಾಗದ ಜನರಿಂದ ಇಂದು ಕನ್ನಡ ಉಳಿದಿದೆ. ಕಲಬುರಗಿಯಲ್ಲಿ ನಡೆಯುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲಾ ಸಮ್ಮೇಳನ ನುಡಿತೋರಣ ಕಟ್ಟಿದೆ. ಬಳ್ಳಾರಿ ಜಿಲ್ಲೆ ಸಾಹಿತ್ಯವಲಯಕ್ಕೆ ಪೂರಕವಾಗಿದೆ ಎಂದರು.

ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿದರು.ರಂಗಭೂಮಿ ಕಲಾವಿದೆ ಕೆ.ನಾಗರತ್ನಮ್ಮ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಿ.ರವಿಕುಮಾರ, ಪ್ರಭುದೇವ ಕಪ್ಪಗಲ್ಲು, ಕೆ.ಎಂ.ಹೇಮಯ್ಯಸ್ವಾಮಿ, ಕೆ.ಎಂ.ಮಹೇಶ್ವರಸ್ವಾಮಿ, ವಿಮ್ಸ್‌ ನಿರ್ದೇಶಕ ದೇವಾನಂದ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next