ಬಳ್ಳಾರಿ: ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ವಿವಿಧೆಡೆ ಸಂಭವಿಸಿದ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಸುಕೋ ಬ್ಯಾಂಕ್ 5 ಲಕ್ಷ ರೂ.ಗಳ ಪರಿಹಾರ ಚೆಕ್‌ನ್ನು ಡಿಸಿ ಎಸ್.ಎಸ್. ನಕುಲ್ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶುಕ್ರವಾರ ನೀಡಿದೆ.
ಸಹಕಾರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಗಮನ ಸೆಳೆದ ಸುಕೋ ಬ್ಯಾಂಕ್ ಸಂತ್ರಸ್ತರ ನೆರವಿಗೆ 5 ಲಕ್ಷ ರೂ. ನೀಡುವ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿ ಮಾದರಿಯಾಗಿದೆ. ಬ್ಯಾಂಕ್‌ನ ಅಧ್ಯಕ್ಷ ಮೋಹಿತ್ ಮಸ್ಕಿ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಎಸ್.ಎಸ್. ನಕುಲ್ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಕಳುಹಿಸಿಕೊಟ್ಟರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹದಲ್ಲಿ ಸಾವಿರಾರು ಜನ ಸಂತ್ರಸ್ತರು ನಾನಾ ಸಮಸ್ಯೆಗಳ ಸುಳಿಗೆ ಸಿಲುಕಿದ್ದು, ಕೆಲವರು ಒಪ್ಪತ್ತಿನ ಆಹಾರವಿಲ್ಲದೇ ಪರದಾಡುತ್ತಿದ್ದಾರೆ. ವರುಣನ ಅಬ್ಬರಕ್ಕೆ ಸಾಕಷ್ಟು ಜನ ತತ್ತರಿಸಿದ್ದಾರೆ. ಬಹುತೇಕ ಎಲ್ಲರೂ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಕೋಟ್ಯಂತರ ರೂ. ನಷ್ಟ ಉಂಟಾಗಿದ್ದು, ಬ್ಯಾಂಕ್ ಮೂಲಕ ಕೈಲಾದಷ್ಟು ನೆರವಾಗಲೆಂದು ಜಿಲ್ಲಾಧಿಕಾರಿಗಳ ಮೂಲಕ 5 ಲಕ್ಷ ರೂ. ಚೆಕ್ ನೀಡಲಾಗಿದೆ ಎಂದರು.
ಚೆಕ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಸಹಕಾರಿ ಕ್ಷೇತ್ರದ ಸುಕೋ ಬ್ಯಾಂಕ್ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ರಾಜ್ಯದಲ್ಲೇ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿದೆ. ಬ್ಯಾಂಕ್‌ನ ಎಲ್ಲ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಅಗ್ನಿಹೋತ್ರಿ, ಕಾರ್ಯದರ್ಶಿ ವೆಂಕಟೇಶ್ ರಾವ್, ಇವೆಂಟ್ ಮ್ಯಾನೇಜರ್ ಅಡವಿ ಸ್ವಾಮಿ ಸೇರಿದಂತೆ ಇತರರು ಇದ್ದರು.