Advertisement

ಬಳ್ಳಾರಿ: 16 ಕಾಲೇಜುಗಳಲ್ಲಿ ಪ್ರಥಮ ಪಿಯು ಐಚ್ಛಿಕ ಕನ್ನಡ ಪರೀಕ್ಷೆ ರದ್ದು

05:44 PM Apr 01, 2022 | Team Udayavani |

ಬಳ್ಳಾರಿ: ಪ್ರಶ್ನೆ ಪತ್ರಿಕೆಯಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಏ.1 ರಂದು ಶುಕ್ರವಾರ ನಡೆಯಬೇಕಿದ್ದ ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯ ವಿಷಯ ಸಂಖ್ಯೆ 16 ಐಚ್ಛಿಕ ಕನ್ನಡ ಪರೀಕ್ಷೆಯನ್ನು ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ರದ್ದುಗೊಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಜು ಅವರು ಆದೇಶ ಹೊರಡಿಸಿದ್ದಾರೆ.

Advertisement

ಪ್ರಥಮ ಪಿಯು ಪರೀಕ್ಷೆಗಳು ಏ.1 ರಂದು ಶುಕ್ರವಾರದಿಂದ ರಾಜ್ಯಾದ್ಯಂತ ಆರಂಭವಾಗಿದ್ದು, ಮೊದಲ ದಿನ ಶುಕ್ರವಾರ ಮಧ್ಯಾಹ್ನ ೨ ಗಂಟೆಯಿಂದ ಸಂಜೆ ೫.೧೫ರವರೆಗೆ ಲಾಜಿಕ್ ಮತ್ತು ಐಚ್ಛಿಕ ವಿಷಯ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಐಚ್ಛಿಕ ವಿಷಯ ಪ್ರಶ್ನೆ ಪತ್ರಿಕೆಯ ತಲೆಬರಹ ಪ್ರಥಮ ಪಿಯು ಬದಲಿಗೆ ದ್ವಿತೀಯ ಪಿಯು ಎಂದು ಮುದ್ರಣವಾಗಿರುವುದು ಪರೀಕ್ಷೆಗೆ ರದ್ದುಗೊಳಿಸಲು ಕಾರಣವಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ವಿತರಣೆಗೆ ಮುನ್ನವೇ ಪ್ರಶ್ನೆಪತ್ರಿಕೆಯಲ್ಲಿ ಆಗಿರುವ ಈ ಮುದ್ರಣ ಲೋಪವನ್ನು ಉಪನ್ಯಾಸಕರು, ಮೇಲ್ವಿಚಾರಕರು ಪತ್ತೆ ಹಚ್ಚಿರುವ ಹಿನ್ನೆಲೆಯಲ್ಲಿ ಕೂಡಲೇ ಐಚ್ಛಿಕ ಕನ್ನಡ ಪರೀಕ್ಷೆಯನ್ನು ರದ್ದುಗೊಳಿಸಿ, ಏಪ್ರಿಲ್ 16 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.45 ರವರೆಗೆ ನಡೆಸಲಾಗುವುದು ಎಂದು ಡಿಡಿಪಿಯು ರಾಜು ಅವರು ಆದೇಶ ಹೊರಡಿಸಿದ್ದಾರೆ.

ರಾಜ್ಯಾದ್ಯಂತ ಎಲ್ಲೆಡೆ ಪ್ರಥಮ ಪಿಯು ಪರೀಕ್ಷೆಗಳು ಸುಸೂತ್ರವಾಗಿ ನಡೆದಿವೆ. ಬಳ್ಳಾರಿ/ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಮಾತ್ರ ಪ್ರಶ್ನೆ ಪತ್ರಿಕೆಯಲ್ಲಿ ಈ ದೋಷ ಕಂಡುಬಂದಿದೆ. ಅವಳಿ ಜಿಲ್ಲೆಗಳ ೧೬೧ ಪಿಯು ಕಾಲೇಜುಗಳ ಪೈಕಿ ಕೇವಲ 16 ಕಾಲೇಜುಗಳಲ್ಲಿ ಮಾತ್ರ ಐಚ್ಚಿಕ ಕನ್ನಡ ವಿಷಯ ಅಧ್ಯಯನಕ್ಕೆ ಅವಕಾಶವಿದೆ.

ಈ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಈ ಕಾಲೇಜುಗಳಿಂದ ಒಟ್ಟು 1700 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ತಲೆಬರಹ ಮುದ್ರಣ ಲೋಪವಾಗಿರುವ ಪ್ರಶ್ನೆ ಪತ್ರಿಕೆಯಲ್ಲಿನ ಪ್ರಶ್ನೆಗಳು ಸಹ ದ್ವಿತೀಯ ಪಿಯುಗೆ ಸಂಬಂಧಿಸಿದ್ದೇ ಇಲ್ಲವೇ ಎಂಬುದನ್ನು ಪರಿಶೀಲಿಸಿಲ್ಲ. ತಲೆಬರಹದಲ್ಲಿ ಲೋಪವಾಗಿದ್ದನ್ನು ನೋಡಿದಾಕ್ಷಣ ಪರೀಕ್ಷೆಯನ್ನೇ ರದ್ದುಗೊಳಿಸಿ, ಮುಂದೂಡಲಾಗಿದ್ದು, ಏ.16 ರಂದು ಬೆಳಗ್ಗೆ9.30 ರಿಂದ ಮಧ್ಯಾಹ್ನ 12.45 ರವರೆಗೆ ನಡೆಸಲಾಗುವುದು ಎಂದು ಡಿಡಿಪಿಯು ರಾಜು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next