Advertisement

ಹಸಿರು ಪಟಾಕಿಯೂ ಇಲ್ಲ.. ಜಾಗೃತಿಯೂ ಇಲ್ಲ!

12:39 PM Oct 27, 2019 | |

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಿಡಿಸುವ ಪಟಾಕಿಗಳಿಂದ ಸಂಭವಿಸುವ ಅನಾಹುತ, ಅಪಘಾತಗಳನ್ನು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ, ವಿಮ್ಸ್‌ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಸನ್ನದ್ಧವಾಗಿದ್ದರೆ, ಮಾಲಿನ್ಯ ನಿಯಂತ್ರಿಸಬೇಕಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆಗೆ ಪರಿಸರಕ್ಕೆ ಹಾನಿಕಾರಕವಲ್ಲದ ಹಸಿರು ಪಟಾಕಿ ಬಗ್ಗೆ ಮಾಹಿತಿಯೇ ಇಲ್ಲ. ಈ ಬಗ್ಗೆ ಜನರಲ್ಲೂ ಸಮರ್ಪಕವಾಗಿ ಜಾಗೃತಿಯೂ ಮೂಡಿಸಿಲ್ಲ. ಈ ಬಾರಿಯೂ ಯುವಕ, ಯುವತಿಯರು, ಮಕ್ಕಳು ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸಿ ಅನಾಹುತಕ್ಕೊಳಗಾದಲ್ಲಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಸೇರಿದಂತೆ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಆಂಬ್ಯುಲೆನ್ಸ್‌, ಔಷಧಗಳನ್ನು ಸಿದ್ಧಪಡಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಶಿವರಾಜ್‌ ಹೆಡೆ ಸ್ಪಷ್ಟಪಡಿಸಿದ್ದಾರೆ.

Advertisement

ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ಯಾವುದೇ ಗ್ರಾಮ, ತಾಲೂಕುಗಳಲ್ಲಿ ಪಟಾಕಿ ಸಿಡಿತದಿಂದ ಯಾವುದೇ ಅನಾಹುತಗಳು ಸಂಭವಿಸಿದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಆಂಟಿಬಯೋಟಿಕ್‌, ಪೇನ್‌ಕಿಲ್ಲರ್‌ (ರೋಗ ನಿರೋಧಕ ಚುಚ್ಚುಮದ್ದು) ಸೇರಿದಂತೆ ಇನ್ನಿತರೆ ಅಗತ್ಯ ಔಷಧಗಳನ್ನು ಮುಂಜಾಗ್ರತಾ ಕ್ರಮವಹಿಸಿ ಸಿದ್ಧಪಡಿಸಿಕೊಂಡಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಸಂಬಂಧಪಟ್ಟ ವೈದ್ಯರಿಗೆ ಸೂಚನೆ ನೀಡಿದ್ದಾರೆ.

ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಸಮೀಪದ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆ, ವಿಮ್ಸ್‌ಗೆ ಕರೆತಂದಲ್ಲಿ ಅಲ್ಲಿಯೂ ಸೂಕ್ತ ಚಿಕಿತ್ಸೆ ಲಭ್ಯವಾಗಲಿದೆ.

ಜಾಗೃತಿ ಮೂಡಿಸದ ಪಿಸಿಬಿ: ಶಬ್ದ ಮಾಲಿನ್ಯ, ವಾಯುಮಾಲಿನ್ಯ ನಿಯಂತ್ರಿಸಲು “ಹಸಿರು ಪಟಾಕಿ’ ಎಂಬ ಹೊಸ ಪಟಾಕಿಯನ್ನು ಬಿಡುಗಡೆಗೊಳಿಸಲಾಗಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಮಟ್ಟದ ಕಚೇರಿಗೆ ಕಳುಹಿಸಿಕೊಟ್ಟಿದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ. ಕೇವಲ ಪ್ರತಿವರ್ಷ ದಂತೆ ಈ ಬಾರಿಯೂ ಇಲ್ಲಿನ ಬಾಪೂಜಿನಗರ, ಹೀರದ ಸೂಗಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಟಾಕಿ ಸಿಡಿಸುವುದರಿಂದ ಸಂಭವಿಸುವ ಅನಾಹುತಗಳು, ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಗಿದೆ ಹೊರತು, ಹಸಿರು ಪಟಾಕಿ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲೂ ಮಾಹಿತಿ ಇಲ್ಲ.

ವಿಶೇಷವೆಂದರೆ ನಗರದ ಜಿಲ್ಲಾ ಕ್ರೀಡಾಂಗಣ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಪಟಾಕಿ ಮಾರಾಟ ಮಳಿಗೆಗಳಲ್ಲಿರುವ ಪಟಾಕಿಗಳನ್ನೇ ಪರಿಶೀಲಿಸಿದ್ದಾರೆ. ಅಲ್ಲದೇ, ಪಟಾಕಿ ಬಾಕ್ಸ್‌ಗಳ ಮೇಲೆ ಗ್ರೀನ್‌ ಆಟಂಬಾಂಬ್‌, ಫೈರ್‌ ಕ್ರ್ಯಾಕರ್‌ ಗ್ರೀನ್‌ ಎಂದು ಬರೆಯಲಾಗಿದೆ. ಈ ಕುರಿತು ಮಾರಾಟಗಾರರನ್ನು ಕೇಳಿದರೆ ಕಡಿಮೆ ಶಬ್ದ, ಕಡಿಮೆ ಹೊಗೆ ಬಿಡುವುದೇ ಹಸಿರು ಪಟಾಕಿಗಳು ಎನ್ನುತ್ತಾರೆ. ಮಂಡಳಿ ಮೇಲಧಿಕಾರಿಗಳಿಂದ ನಮಗೂ ಮಾಹಿತಿ ಬಂದಿದೆ. ಆದರೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎನ್ನುತ್ತಾರೆ ಮಂಡಳಿ ಅಧಿಕಾರಿಗಳು.

Advertisement
Advertisement

Udayavani is now on Telegram. Click here to join our channel and stay updated with the latest news.

Next