Advertisement

ಆಂಧ್ರದಿಂದ ಬಂದವರ ಮಾಹಿತಿ ನೀಡಿ

05:12 PM Apr 16, 2020 | Naveen |

ಬಳ್ಳಾರಿ: ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದಂತೆ ಏ.20ರ ವರೆಗೆ ಲಾಕ್‌ಡೌನ್‌ ಮುಂದುವರೆಯಲಿದ್ದು, ನಂತರ ರಾಜ್ಯ ಸರ್ಕಾರದಿಂದ ಬರುವ ನಿರ್ದೇಶನಗಳನ್ನು ಆಧರಿಸಿ ಕೆಲವೊಂದು ಕ್ಷೇತ್ರಗಳಿಗೆ ಸಡಿಲಿಕೆ ನೀಡಲಾಗುವುದು. ಆದರೆ, ಅಂತರ ಜಿಲ್ಲೆ, ಅಂತರ ರಾಜ್ಯ ಸಾರಿಗೆ ಸಂಪರ್ಕಕ್ಕೆ ಸಡಿಲಿಕೆ ಇಲ್ಲ ಎಂದು ಡಿಸಿ ಎಸ್‌. ಎಸ್‌. ನಕುಲ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡನೇ ಹಂತದ ಲಾಕ್‌ಡೌನ್‌ ಆರಂಭವಾಗಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿಗಳು ಸಹ ಬಂದಿವೆ. ರಾಜ್ಯ ಸರ್ಕಾರದ ಮಾರ್ಗಸೂಚಿಗಳು ಬರಲಿದ್ದು, ಈ ತಿಂಗಳ 20ರ ವರೆಗೆ ಈಗ ನಡೆಯುತ್ತಿರುವ ಕ್ರಮಗಳು ಮುಂದುವರೆಯಲಿವೆ. ನಂತರ ಕೆಲವೊಂದು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗುತ್ತದೆ ಎಂದವರು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ವೈರಸ್‌ 6 ಪಾಸಿಟಿವ್‌ ಪ್ರಕರಣಗಳು ಇವೆ. 549 ಜನರ ರಕ್ತದ ಮಾದರಿ, ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಮೈಸೂರು ನಂತರ ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು 1,25,268 ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಪಾಸಿಟಿವ್‌ ಪ್ರಕರಣಗಳು ಕಂಡಬಂದಿರುವ ಬಳ್ಳಾರಿ ನಗರದ ಗುಗ್ಗರಹಟ್ಟಿ, ಹೊಸಪೇಟೆ ನಗರ, ಸಿರುಗುಪ್ಪ ತಾಲೂಕಿನ ಎಚ್‌.ಹೊಸಳ್ಳಿ ಗ್ರಾಮವನ್ನು ಕಂಟೇನ್ಮೆಂಟ್‌ ಪ್ರದೇಶವಾಗಿ ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ಅತಿಹೆಚ್ಚು ಜನರನ್ನು ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ 1245 ಜನರು ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ. 412 ಜನರಿಗೆ ಸೋಂಕು ಇಲ್ಲದಿರುವ ಬಗ್ಗೆ ದೃಢಪಟ್ಟಿದೆ. ಇನ್ನು 108 ಜನರ ವರದಿ ಬರಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟು 16 ಜ್ವರ ತಪಾಸಣಾ ಕೇಂದ್ರಗಳನ್ನು ಗುರುತಿಸಲಾಗಿದ್ದು, 1090 ಹಾಸಿಗೆಯುಳ್ಳ 10 ಕೋವಿಡ್‌ ಕೇರ್‌ ಸೆಂಟರ್‌ ಗಳನ್ನು ತೆರೆಯಲಾಗಿದೆ. 543 ಹಾಸಿಗೆಯುಳ್ಳ 4 ಕೋವಿಡ್‌ ಹೆಲ್ತ್‌ ಸೆಂಟರ್‌ಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕೋವಿಡ್‌ 19 ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ, ಆರೋಗ್ಯ, ಸಿಬ್ಬಂದಿಗೆ ಹೈಡ್ರಾಕ್ಸೀನ್‌ ಕ್ಲೋರೊಫಿನ್‌ ಮಾತ್ರೆಗಳನ್ನು ಹಂತಹಂತವಾಗಿ ನೀಡಲಾಗುತ್ತದೆ ಎಂದ ಡಿಸಿ ನಕುಲ್‌, ಖಾಸಗಿ ಆಸ್ಪತ್ರೆಗಳನ್ನು ತೆರೆಯುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರೂ ತೆರೆಯಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದರು.

ನಕಲಿ ವೈದ್ಯರ ಮೇಲೆ ದಾಳಿ: ಜಿಲ್ಲೆಯ ಸಂಡೂರು, ಹರಪನಹಳ್ಳಿ, ಹೊಸಪೇಟೆ ಸೇರಿ ಹಲವೆಡೆ ನಕಲಿ ಕ್ಲೀನಿಕ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಇವರ ಬಳಿ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆ ಇಲ್ಲದೆ, ಪಶ್ಚಿಮ ಬಂಗಾಳದ ವಿವಿಯೊಂದ ಪ್ರಮಾಣ ತೋರಿಸಿದ ಹಿನ್ನೆಲೆಯಲ್ಲಿ 9 ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.

Advertisement

ಎಸ್‌ಪಿ ಸಿ.ಕೆ. ಬಾಬಾ ಮಾತನಾಡಿ, ಜಿಲ್ಲೆಯಲ್ಲಿ 16 ಮತ್ತು ಅಂತಾರಾಜ್ಯ ಗಡಿಯಲ್ಲಿ 10 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ನೆರೆಯ ಆಂಧ್ರದ ಕರ್ನೂಲ್‌, ಅನಂತಪುರ ಜಿಲ್ಲೆಗಳಲ್ಲಿ ಕೋವಿಡ್ ವೈರಸ್‌ನ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಇರುವ ಕಾರಣ, ಅಲ್ಲಿಂದ ಯಾರೊಬ್ಬರೂ ಜಿಲ್ಲೆಗೆ ಬರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಈ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್‌ ಅಳವಡಿಸಿ ಬಂದ್‌ ಮಾಡಲಾಗಿದೆ. ಜತೆಗೆ ಗ್ರಾಮಗಳಲ್ಲಿನ ಕಾಲುದಾರಿ, ಹಗರಿ, ಕಾಲುವೆ ಮಾರ್ಗ ಸೇರಿ 16 ಕಾಲುದಾರಿಗಳನ್ನು ಸಹ ಬಂದ್‌ ಮಾಡಲಾಗಿದೆ.

ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿದ 1500 ಬೈಕ್‌, 300 ವಿವಿಧ ವಾಹನಗಳನ್ನು ಸೀಜ್‌ ಮಾಡಿದ್ದೇವೆ. 75 ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ನಿತೀಶ್‌, ಡಿಎಚ್‌ಒ ಡಾ| ಎಚ್‌.ಎಲ್‌. ಜನಾರ್ಧನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next