Advertisement

ಕೊರೊನಾ ತಡೆಗಟ್ಟಲು ಅಗತ್ಯ ಕ್ರಮ

01:10 PM Mar 05, 2020 | Naveen |

ಬಳ್ಳಾರಿ: ಕೊರೊನಾ ವೈರಸ್‌ ಪ್ರಕರಣಗಳನ್ನು ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಎಲ್ಲ ರೀತಿಯ ಸಿದ್ಧತೆಗಳನ್ನು ಬಳ್ಳಾರಿ ಜಿಲ್ಲಾಡಳಿತದಿಂದ ಕೈಗೊಳ್ಳಲಾಗಿದ್ದು, ಇದುವರೆಗೆ ಯಾವುದೇ ರೀತಿಯ ಪ್ರಕರಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಸ್ಪಷ್ಟಪಡಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಕೊರೊನಾ ವೈರಸ್‌ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಚಿಸಲಾಗಿರುವ ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳ್ಳಾರಿ ಜಿಲ್ಲೆಯ ಜಿಲ್ಲಾಸ್ಪತ್ರೆ, ವಿಮ್ಸ್‌ ಮತ್ತು ಹೊಸಪೇಟೆಯ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಪತ್ತೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಐಸೋಲೆಟೆಡ್‌ ವಾರ್ಡ್‌ಗಳನ್ನು ತೆರೆಯಲಾಗಿದೆ. 10 ಹಾಸಿಗೆಗಳ ವ್ಯವಸ್ಥೆ, ಕೊರೊನಾ ವೈರಸ್‌ ಪತ್ತೆ, ಚಿಕಿತ್ಸೆ, ಮಾಸ್ಕ್ ಮತ್ತು ಔಷಧಿಗಳು ಸೇರಿದಂತೆ ಕೊರೊನಾ ವೈರಸ್‌ ಸಂಬಂಧಿಸಿದ ಕಿಟ್‌ಗಳ ವ್ಯವಸ್ಥೆ, ಸಿಬ್ಬಂದಿ ಕಾರ್ಯನಿರ್ವಹಣೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಜಿಲ್ಲೆಯಲ್ಲಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ ಅವರು, ಮುಂದಿನ 10 ದಿನಗಳಿಗೆ ಬೇಕಾಗುವ ಅಗತ್ಯ ಔಷಧ , ಪರಿಕರಗಳು, ಕಿಟ್‌ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕೊರೊನಾ ವೈರಸ್‌ ಪ್ರಕರಣಗಳ ಪರಿಶೀಲನೆಗೆ ಸಂಬಂಧಿಸಿದಂತೆ 4 ತಂಡಗಳನ್ನು ರಚಿಸಲಾಗಿದೆ ಮತ್ತು ಇದರ ಜೊತೆಗೆ ರ್ಯಾಪಿಡ್‌ ರೆಸ್ಪಾನ್ಸ್‌ ತಂಡ ಕೂಡ ಕಾರ್ಯನಿರ್ವಹಿಸುತ್ತಿದೆ. 2 ಆಂಬುಲೆನ್ಸ್ ಗಳನ್ನು ಹಾಗೂ ಸಿಬ್ಬಂದಿಗಳನ್ನು ಇದಕ್ಕಾಗಿಯೇ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ ಡಿಸಿ ನಕುಲ್‌ ಅವರು, ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳ ಸಭೆ ನಡೆಸಿ ಈ ಕುರಿತು ತಿಳಿಸಬೇಕು. ಈ ರೀತಿಯ ಸಂದೇಹಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ಗಮನಕ್ಕೆ ತರುವಂತೆ ಕೋರಬೇಕು. ಹೋಟೆಲ್‌ ಮಾಲೀಕರ ಸಭೆ ನಡೆಸಿ ಅಗತ್ಯ ಸಲಹಾ ಸೂಚನೆ ನೀಡಬೇಕು ಎಂದರು.

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಬೃಹತ್‌ ಫಲಕಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಬೇಕು. ಕರಪತ್ರಗಳ ಮೂಲಕವೂ ಜಾಗೃತಿ ಮೂಡಿಸಬೇಕು. ಇದು ಅತ್ಯಂತ ಸೂಕ್ಷ್ಮ ವಿಷಯವಾಗಿರುವುದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ವೈದ್ಯರು ಯಾವುದೇ ರೀತಿಯ ಹೇಳಿಕೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮತ್ತು ತಿಳಿಸುವಂತಿಲ್ಲ ಎಂದು ಅವರು ಸೂಚಿಸಿದರು.

Advertisement

ಸಂದೇಹ, ಗೊಂದಲಗಳಿಗೆ ಜನಸ್ಪಂದನ ಕಂಟ್ರೋಲ್‌ ರೂಂಗೂ ಕರೆ ಮಾಡಿ. ಕೊರೊನಾ ವೈರಸ್‌ಗೆ ಸಂಬಂಸಿದಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸಂದೇಹಗಳು ಮತ್ತು ಗೊಂದಲಗಳಿದ್ದರೆ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಜನಸ್ಪಂದನಾ ಕಂಟ್ರೋಲ್‌ ರೂಂಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ಕಂದಾಯ ಇಲಾಖೆಯ ಸಿಬ್ಬಂದಿ ಜತೆಗೆ ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ನಕುಲ್‌ ತಿಳಿಸಿದರು.

ಜನಸ್ಪಂದನಾ ಕಂಟ್ರೋಲ್‌ ರೂಂ ನಂ:8277888866 ಹಾಗೂ ದೂ:08392- 277100ಗೆ ಕರೆ ಮಾಡಬಹುದು ಮತ್ತು ವಾಟ್ಸ್‌ ಆಪ್‌ ಮಾಡಬಹುದು.1077 ಉಚಿತ ಸಹಾಯವಾಣಿಗೂ ಕರೆ ಮಾಡಬಹುದು ಎಂದು ಅವರು ತಿಳಿಸಿದರು. ಡಿಎಚ್‌ಒ ಅವರು ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಳ್ಳಲಾಗಿರುವ ಕ್ರಮಗಳನ್ನು ಸಭೆಗೆ ವಿವರಿಸಿದರು. ವಿದೇಶಗಳಿಂದ ಆಗಮಿಸುವ ಪ್ರವಾಸಿಗರಲ್ಲಿ ಕೊರೊನಾ ವೈರಸ್‌ ಪರಿಶೀಲನೆಗೆ ಸಂಬಂಧಿಸಿದಂತೆ ತೋರಣಗಲ್ಲು ವಿಮಾನ ನಿಲ್ದಾಣ, ಬಳ್ಳಾರಿ ಮತ್ತು ಹೊಸಪೇಟೆ ರೈಲ್ವೆ ನಿಲ್ದಾಣಗಳು ಹಾಗೂ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ತಂಡಗಳನ್ನು ನಿಯೋಜಿಸಲಾಗಿದೆ.

ಇರಾನ್‌ನಿಂದ ಆಗಮಿಸಿದ್ದ 12 ಜನರನ್ನು ಹಾಗೂ ರಷ್ಯಾ ಮತ್ತು ದುಬೈ ಕಡೆಯಿಂದ ಆಗಮಿಸಿದ್ದ ಪ್ರವಾಸಿಗರನ್ನು ಪರಿಶೀಲಿಸಲಾಗಿದ್ದು, ಆ ರೀತಿಯ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದರು. ಈ ಕೊರೊನಾ ವೈರಸ್‌ ಕುರಿತು ಯಾವುದೇ ರೀತಿಯ ಭಯಬೇಡ ಜಾಗೃತಿ ಇರಲಿ ಎಂದು ಅವರು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್‌, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ| ಎನ್‌. ಬಸರೆಡ್ಡಿ, ವಿಮ್ಸ್‌ನ ಡಾ| ಮರಿರಾಜ್‌ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಜಾನಕಿರಾಂ, ಡಿಡಿಪಿಐ ರಾಮಪ್ಪ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಖಾಸಗಿ ಆಸ್ಪತ್ರೆಗಳ/ವೈದ್ಯಕೀಯ ಕಾಲೇಜುಗಳ ಸಂಘದ ಪ್ರತಿನಿಧಿ ಗಳು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರು, ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಪ್ರತಿನಿಧಿಗಳು ಸೇರಿದಂತೆ ವಿವಿಧ ಪ್ರಮುಖ ಆಸ್ಪತ್ರೆಗಳ ವೈದ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next