ಬಳ್ಳಾರಿ: ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ವಿವಿಧೆಡೆ ಫೆ. 27ರಂದು ನಡೆಯುವ ಜಾತ್ರಾ ಮಹೋತ್ಸವಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಡಿಸಿ ಪವನಕುಮಾರ್ ಮಾಲಪಾಟಿ ಆದೇಶ ಹೊರಡಿಸಿದ್ದಾರೆ.
ಫೆ. 27ರಂದು ಭರತ ಹುಣ್ಣಿಮೆಯಂದು ನಡೆಯಲಿರುವ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚೆಂಗಿದುರ್ಗ ಗ್ರಾಮದಲ್ಲಿ ನಡೆಯುವ ಶ್ರೀ ಉತ್ಸವಾಂಭ ದೇವಸ್ಥಾನದ ವಾರ್ಷಿಕ ರಥೋತ್ಸವ, ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ಶ್ರೀ ಉತ್ತಿನ ಯಲ್ಲಮ್ಮ ದೇವಸ್ಥಾನದ ವಾರ್ಷಿಕ ರಥೋತ್ಸವ, ಬಳ್ಳಾರಿ ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ, ಜಿಲ್ಲೆಯ ಸಂಡೂರು ತಾಲೂಕಿನ ಗೆಣತಿಕಟ್ಟೆ ಗ್ರಾಮದ ಶ್ರೀ ಆಂಜಿನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿ ಸಲಾಗಿದೆ.
ಈ ದೇವಸ್ಥಾನಗಳ ಆಡಳಿತ ಮಂಡಳಿಯವರು ದೇವಸ್ಥಾನಗಳಲ್ಲಿ ಕೋವಿಡ್ 19 ಮಾರ್ಗಸೂಚಿ ಅನ್ವಯ ಮುಂಜಾಗ್ರತಾ ಕ್ರಮವಹಿಸಿ ದಿನನಿತ್ಯದ ಪೂಜಾ ಧಾರ್ಮಿಕ ವಿ ಧಿವಿಧಾನಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಜಾತ್ರಾ ಪ್ರದೇಶದಲ್ಲಿ, ರಸ್ತೆಯ ಬದಿಗಳಲ್ಲಿ, ಜಮೀನುಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿರುವ ಅವರು ಆದೇಶ ಉಲ್ಲಂಘಿಸಿದವರಿಗೆ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ದೇವಸ್ಥಾನದ ಆಡಳಿತ ಮಂಡಳಿಗಳು, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೂವಿನಹಡಗಲಿ ಉಪ ವಿಭಾಗಾ ಧಿಕಾರಿಗಳು, ತಹಶೀಲ್ದಾರ್ ರು, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅವರು ಸೂಚನೆ ನೀಡಿದ್ದಾರೆ.