ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ-ದಿನೇ ಹೆಚ್ಚುತ್ತಿದ್ದು, ಶುಕ್ರವಾರ 23 ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.
ಕಳೆದ ಜೂನ್ 10ರಂದು ಜಿಲ್ಲೆಯಲ್ಲಿ 94 ಇದ್ದ ಸೋಂಕಿತರ ಸಂಖ್ಯೆ ಜೂ.11ರಂದು ಒಂದೇ ದಿನ 53 ಹೊಸ ಪ್ರಕರಣಗಳು ಪತ್ತೆಯಾದವು. ಇದರಿಂದ ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿತ್ತು. ಇದೀಗ ಜೂ.12ರಂದು ಪುನಃ 23 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ. ಈ ಪೈಕಿ ಸುಮಾರು 100ಕ್ಕೂ ಹೆಚ್ಚು ಪ್ರಕರಣಗಳು ಜಿಂದಾಲ್ ಸಂಸ್ಥೆಯ ನೌಕರರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಶುಕ್ರವಾರದ ರಾಜ್ಯ ಮೀಡಿಯಾ ಬುಲೆಟಿನ್ ನಲ್ಲಿ ಪ್ರಕಟವಾದ ಒಟ್ಟು 97 ಹೊಸ ಪ್ರಕರಣಗಳ ಪೈಕಿ 85 ಜಿಂದಾಲ್ ಸಂಸ್ಥೆಯ ನೌಕರರಾಗಿದ್ದು, ಸಂಸ್ಥೆಯ ಪಿ.4184, ಪಿ.4350, ಪಿ.5577, ಪಿ.5578, ಪಿ.5576, ಪಿ.5579, ಪಿ.5580, ಪಿ.5374, ಪಿ.5376 ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಸೋಂಕು ಆವರಿಸಿದೆ. ಇನ್ನುಳಿದವರ ಪೈಕಿ 9 ಸೋಂಕಿತರು ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದಾರೆ. ಮೂರು ಐಎಲ್‌ಐ ಪ್ರಕರಣಗಳಾಗಿವೆ. ಒಬ್ಬರು ಹೊಸಪೇಟೆಯ ಈಶ್ವರನಗರ, ಮತ್ತೊಬ್ಬರು ನಗರದ ಹವಂಭಾವಿಯ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 170 ಸೋಂಕು ಪತ್ತೆಯಾಗಿದ್ದು, ಈ ಪೈಕಿ 49 ಜನರು ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದು, ಇನ್ನುಳಿದ 120 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಟಕವಾದ ಜಿಂದಾಲ್: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಆರಂಭದಿಂದಲೂ ಕಡಿಮೆ ಸಂಖ್ಯೆಯಲ್ಲಿದ್ದ ಕೋವಿಡ್ ಸೋಂಕಿತರ ಸಂಖ್ಯೆ ಜಿಂದಾಲ್ ಸಂಸ್ಥೆಯಿಂದಾಗಿ ಶತಕದ ಗಡಿ ದಾಟಿ 170ಕ್ಕೆ ಏರಿಕೆಯಾಗಿದೆ. ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿರುವ ಜಿಂದಾಲ್ ಸಂಸ್ಥೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.