ಬಳ್ಳಾರಿ: ಕೊರೊನಾ ವೈರಸ್ ಹಿನ್ನೆಲೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಈಗಾಗಲೇ ಸ್ಥಾಪಿಸಲಾಗಿದ್ದು, ಅದು ನಿರಂತರವಾಗಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ ಮತ್ತು ಹಂಟಿಂಗ್ ಸೌಲಭ್ಯಗಳನ್ನು ಇನ್ನಷ್ಟು ಜಾಸ್ತಿ ಮಾಡಲಾಗುವುದು ಎಂದು ಐಇಸಿ ಮತ್ತು ಕಂಟ್ರೋಲ್ ರೂಂ ತಂಡದ ಸಹ ಮುಖ್ಯಸ್ಥ, ಯೋಜನಾ ನಿರ್ದೇಶಕ ರಮೇಶ ಹೇಳಿದರು.
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಐಇಸಿ ಮತ್ತು ಕಂಟ್ರೋಲ್ ರೂಂ ತಂಡದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈಗಾಗಲೇ ಕಂಟ್ರೋಲ್ ರೂಂ (ದೂ:08392- 277100, ಮೊ:8277888866) ಸ್ಥಾಪಿಸಲಾಗಿದೆ. ಇಂದು ಸಂಜೆಯೊಳಗೆ ಅವುಗಳ ಹಂಟಿಂಗ್ ಸೌಲಭ್ಯ ಹೆಚ್ಚಿಸಲಾಗುವುದು. ಅಲ್ಲಿಗೆ ಬರುವ ದೂರುಗಳನ್ನು ಸಂಬಂಸಿದವರಿಗೆ ತುರ್ತಾಗಿ ಕಳುಹಿಸಿಕೊಡಲಾಗುವುದು. ಈ ಕಂಟ್ರೋಲ್ ರೂಂನಲ್ಲಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಜತೆಗೆ ಒಬ್ಬರು ಕೌನ್ಸಿಲರ್ ಇರಲಿದ್ದು, ಅವರು ಕೊರೋನಾ ಕುರಿತು ಆತಂಕ-ದುಗುಡಗಳನ್ನು ತೋರ್ಪಡಿಸಿಕೊಂಡು ಕಂಟ್ರೋಲ್ ರೂಂಗೆ ಸಂಪರ್ಕಿಸುವವರಿಗೆ ಅಗತ್ಯ ಟೆಲಿಪೋನಿಕ್ ಕೌನ್ಸೆಲಿಂಗ್ ಮಾಡಲಿದ್ದಾರೆ ಎಂದರು.
ರ್ಯಾಪಿಡ್ ರೆಸ್ಪಾನ್ಸ್ ತಂಡದೊಂದಿಗೆ ಸಮನ್ವಯಕಾರರಾಗಿ ಕೆಲಸ ಮಾಡುವುದರ ಜತೆಗೆ ಜನರಿಂದ ದೂರುಗಳನ್ನು ಸ್ವೀಕರಿಸುವ ಮತ್ತು ರವಾನಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದ ರಮೇಶ ಅವರು, ಇದಕ್ಕೆ ಅಗತ್ಯ ಸಿಬ್ಬಂದಿ ಒದಗಿಸುವ ನಿಟ್ಟಿನಲ್ಲಿ ಸಮಿತಿ ಸದಸ್ಯರಾಗಿರುವವರ ಇಲಾಖೆಗಳ ಸಿಬ್ಬಂದಿಯ ಮಾಹಿತಿಯನ್ನು ಒದಗಿಸುವಂತೆ ಅವರು ಕೋರಿದರು.
ಇಂದು ಸಂಜೆಯೊಳಗೆ ಈ ಸಮಿತಿಗೆ ಸಂಬಂಧಿಸಿದ ಕ್ರಿಯಾಯೋಜನೆ ಸಲ್ಲಿಸಬೇಕಾಗಿದ್ದು, ಈ ತಂಡಕ್ಕೆ ಅವಶ್ಯ ಮತ್ತು ಅಗತ್ಯವಾದವುಗಳನ್ನು ತಿಳಿಸಿದಲ್ಲಿ ಸೇರಿಸಲಾಗುವುದು. ಅಲ್ಲದೇ, ಈಗಾಗಲೇ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕರೋನಾ ಕುರಿತು ಸಾಕಷ್ಟು ಪ್ರಮಾಣದಲ್ಲಿ ಐಇಸಿ ಚಟುವಟಿಕೆಗಳನ್ನು ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಡಾ| ಸುನೀತಾ ಸಿದ್ರಾಮ್, ಬಿ.ಕೆ. ರಾಮಲಿಂಗಪ್ಪ, ಡಾ| ಕೃಷ್ಣಸ್ವಾಮಿ, ಡಾ| ಬಿ.ಕೆ.ಎಸ್.ಸುಂದರ್, ಅಶೋಕ್, ರಾಜಶೇಖರಪ್ಪ, ಈಶ್ವರ್ ದಾಸಪ್ಪನವರ್, ರಮೇಶ, ಸೈಯದ್ ಹುಸೇನ್ ಮತ್ತಿತರರು ಇದ್ದರು.