Advertisement

ಚುನಾವಣೆಗೆ ಮುನ್ನ “ಕೈ’ಗೆ ಶಾಕ್‌ 

06:00 AM Nov 03, 2018 | Team Udayavani |

ದೊಡ್ಡಬಳ್ಳಾಪುರ: ನಗರದ ಹೊರವಲಯದಲ್ಲಿ 2010ರಲ್ಲಿ ನಡೆದಿದ್ದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಕಲಾಪಕ್ಕೆ ಗೈರು ಹಾಜರಾಗಿದ್ದಕ್ಕಾಗಿ ಹಾಗೂ ನ್ಯಾಯಾಲಯದ ಆದೇಶದಂತೆ ಗಾಯಾಳುವಿಗೆ ಪರಿಹಾರ ಹಣ ವಿತರಿಸದ ಕಾರಣಕ್ಕಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರಿಗೆ ಸೇರಿರುವ ಚರಾಸ್ತಿಯನ್ನು ಜಪ್ತಿ
ಮಾಡಿಕೊಳ್ಳುವಂತೆ ನಗರದ 4ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.

Advertisement

2010ರ ಏಪ್ರಿಲ್‌ 8ರಂದು ಬೆಂಗಳೂರಿನ ಚಿಕ್ಕಸಂದ್ರ ನಿವಾಸಿ, ವಾಣಿಜ್ಯೋದ್ಯಮಿ ಬಾಲಾಜಿ ಎಂಬುವರು ತಮ್ಮ ಬಜಾಜ್‌
ಚೇತಕ್‌ ಸ್ಕೂಟರ್‌ನಲ್ಲಿ ಕೆಲಸದ ನಿಮಿತ್ತ ದೊಡ್ಡಬಳ್ಳಾಪುರಕ್ಕೆ ಪ್ರಯಾಣಿಸುತ್ತಿದ್ದರು. ದೊಡ್ಡಬಳ್ಳಾಪುರ-ಬೆಂಗಳೂರು ಹೆದ್ದಾರಿಯಲ್ಲಿ ಮಮತಾ ಪೆಟ್ರೋಲ್‌ ಬಂಕ್‌ ಬಳಿ ಹಿಂಬದಿಯಿಂದ ಬಂದ ಟೊಯೋಟಾ ಕ್ವಾಲೀಸ್‌ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸ್ಕೂಟರ್‌ ಸವಾರ ಬಾಲಾಜಿ ಗಂಭೀರವಾಗಿ ಗಾಯಗೊಂಡಿದ್ದರು. ಸ್ಕೂಟರ್‌ ಜಖಂಗೊಂಡಿತ್ತು. ಕಾರು ಮಹಿಳಾ ಮತ್ತು
ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಮಾಲೀಕತ್ವದ್ದಾಗಿತ್ತು.

ಈ ಪ್ರಕರಣ ಸಂಬಂಧ 2012ರಲ್ಲಿ ಸ್ಕೂಟರ್‌ ಸವಾರ ಬಾಲಾಜಿಯವರು ಪರಿಹಾರ ಕೋರಿ ದೊಡ್ಡಬಳ್ಳಾಪುರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ 2017ರ ಅ.31 ರಂದು ತೀರ್ಪು ನೀಡಿ, ಮೋಟಾರು ವಾಹನ ಕಾಯ್ದೆಯಡಿ 67,500 ರೂ.ಪರಿಹಾರ ವಿತರಣೆಗೆ ಆದೇಶಿಸಿತ್ತು. ನ್ಯಾಯಾಲಯಕ್ಕೂ ಹಾಜರಾಗದೆ, ದಂಡವನ್ನು ಸಹ ಪಾವತಿಸದೆ ಉಗ್ರಪ್ಪನವರು, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು. ಆದೇಶ ಬಂದು ವರ್ಷ ಕಳೆದರೂ ಉಗ್ರಪ್ಪನವರು ಯಾವುದೇ ಪರಿಹಾರದ ಹಣ ನೀಡಿರಲಿಲ್ಲ. ಹೀಗಾಗಿ, ಬಾಲಾಜಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಅ.31ರಂದು ಅರ್ಜಿಯ ವಿಚಾರಣೆ ನಡೆಸಿದ 4ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಶುಕ್ಲಾಷ್ಕಪಾಲನ್‌, 67, 
500 ರೂ ಪರಿಹಾರ ಹಾಗೂ ಈ ಹಣಕ್ಕೆ ಬಡ್ಡಿ ಸೇರಿ ಒಟ್ಟೂ 94,925 ರೂ. ಮೌಲ್ಯಕ್ಕೆ ಉಗ್ರಪ್ಪನವರಿಗೆ ಸೇರಿದ ಮನೆಯಲ್ಲಿನ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಚರಾಸ್ತಿಯಲ್ಲಿ ಟಿ.ವಿ., ಫ್ಯಾನ್‌, ವಾಶಿಂಗ್‌ ಮಷಿನ್‌ ಮೊದಲಾದ ಗೃಹಪಯೋಗಿ ವಸ್ತುಗಳು ಹಾಗೂ ವಾಹನಗಳನ್ನು ನಮೂದಿಸಲಾಗಿದೆ ಎಂದು ವಕೀಲರಾದ ಆನಂದ್‌ ಕುಮಾರ್‌ ತಿಳಿಸಿದ್ದಾರೆ.

ಉಗ್ರಪ್ಪ ಅವರು ಸ್ವತಃ ವಕೀಲರಾಗಿದ್ದಾರೆ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿರುವುದು, ನ್ಯಾಯಾಲಯಕ್ಕೆ ಗೈರು ಹಾಜರಾಗಿರುವುದು ಅವರು ನ್ಯಾಯಾಲಯಕ್ಕೆ ತೋರಿರುವ ಅಗೌರವ. ನ್ಯಾಯಾಲಯದ ಆದೇಶವನ್ನು ಗೌರವಿಸುವುದನ್ನು ಅವರು ಮೊದಲು ಕಲಿಯಬೇಕು.
● ಅಮರ್‌, ಬಿಜೆಪಿ ಜಿಲ್ಲಾ ವಕ್ತಾರ.

Advertisement
Advertisement

Udayavani is now on Telegram. Click here to join our channel and stay updated with the latest news.

Next