Advertisement

ಬಳ್ಳಾರಿಯಲ್ಲಿ ಚಿರತೆ ಕೊಂದವರು ನಗರದಲ್ಲಿ ಬಲೆಗೆ

10:56 AM Nov 15, 2018 | |

ಬೆಂಗಳೂರು: ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಮಾರಮ್ಮನ ಗುಡ್ಡೆಯಲ್ಲಿ ವಿಷಪ್ರಾಶನ ಮಾಡಿಸಿ ಕೊಂದಿದ್ದ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳು ಕೊಡಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಕೂಡ್ಲಿಗಿ ತಾಲೂಕಿನ ದೇವಿರಹಟ್ಟಿಯ ಸುರೇಶ್‌ (30) ಪಾಪಣ್ಣ (27), ಬಸವರಾಜ (48) ಬಂಧಿತರು. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿರತೆ ಚರ್ಮ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕೊಡಿಗೇಹಳ್ಳಿಯ ದೇವಿನಗರ ರಿಂಗ್‌ ರಸ್ತೆಯ ಬಳಿ ನ.12ರಂದು ಮದ್ಯಾಹ್ನ 11.45ರ ಸುಮಾರಿಗೆ ಚಿರತೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್‌ ಎಂ,ಎಲ್‌ ಚೇತನ್‌ ಕುಮಾರ್‌ ನೇತೃತ್ವದ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳ ಬಳಿಯಿದ್ದ ಚಿರತೆ ಚರ್ಮ ಹಾಗೂ ಎರಡು ಮೊಬೈಲ್‌ಗ‌ಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಚಿರತೆಗೆ ವಿಷಪ್ರಾಶನ: ಕೂಡ್ಲಿಗಿ ತಾಲೂಕಿನ ಮಾರಮ್ಮನ ಗುಡ್ಡೆಯಲ್ಲಿ ಚಿರತೆಗಳು ಬಂದು ಹೋಗುತ್ತಿದ್ದ ಬಗ್ಗೆ ಅರಿತಿದ್ದ ಆರೋಪಿಗಳು, ಕೆಲವು ತಿಂಗಳುಗಳ ಹಿಂದೆ ಮಾಂಸದ ತುಂಡುಗಳಿಗೆ ವಿಷಬೆರೆಸಿ ಗುಡ್ಡದಲ್ಲಿ ಇಟ್ಟಿದ್ದಾರೆ. ಅದನ್ನು ಸೇವಿಸಿದ ಬಳಿಕ ಚಿರತೆ ಸಾವನ್ನಪ್ಪಿದ್ದು ಚರ್ಮ ಬಿಚ್ಚಿಟ್ಟುಕೊಂಡು ಮಾರಾಟಕ್ಕೆ ಪ್ರಯತ್ನಿಸುತ್ತಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಆರೋಪಿಗಳ ಬಳಿ ಜಪ್ತಿ ಮಾಡಿಕೊಂಡಿರುವ ಚಿರತೆ ಚರ್ಮ ಗಮನಿಸಿದರೆ ಕೆಲವು ದಿನಗಳ ಹಿಂದಷ್ಟೇ ಚಿರತೆ ಕೊಂದಿರುವ ಸಾಧ್ಯತೆಯಿದೆ. ಆದರೆ, ಚಿರತೆ ಕೊಂದಿರುವ ದಿನದ ಬಗ್ಗೆ ಖಚಿತ ಮಾಹಿತಿ ನೀಡಿಲ್ಲ. ಅಲ್ಲದೆ, ಇದೇ ಆರೋಪಿಗಳು ಇದೇ ರೀತಿಯ ಕೃತ್ಯಗಳಲ್ಲಿ ಈ ಹಿಂದೆಯೂ ಭಾಗಿಯಾಗಿದ್ದರೇ ಎಂಬುದರ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಹೇಳಿದರು.

Advertisement

ಚಿರತೆ ಮಾರಾಟ ಮಾಡಲು ಆರೋಪಿಗಳು ಸಾರ್ವಜನಿಕರನ್ನು ಸ್ಥಳೀಯವಾಗಿ ಓಡಾಡಿಕೊಂಡು ಕೆಲವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಮಾಹಿತಿ ಲಭ್ಯವಾಗಿ ಕೊಳ್ಳುವವರ ಸೋಗಿನಲ್ಲಿ ಕಾರ್ಯಾಚರಣೆ ಬಲೆ ಹೆಣೆಯಲಾಗಿತ್ತು. ಚರ್ಮದ ಬೆಲೆ ಖಚಿತಪಡಿಸದ ಆರೋಪಿಗಳು ಸ್ಥಳಕ್ಕೆ ಭೇಟಿ ನೀಡಿವುವವರಗೆ ಯಾವುದೇ ಮಾಹಿತಿ ನೀಡಿರಲಿಲ್ಲ, ಚರ್ಮದ ಚೀಲ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಯ ಬಳಿ ಒಬ್ಬ ಆರೋಪಿ ಕರೆಯೊಯ್ಯುತ್ತಲೇ ಮೂವರನ್ನು ಬಂಧಿಸಲಾಯಿತು ಎಂದು ತಿಳಿಸಿದರು. 

ಕೆಲ ದಿನ ಹಿಂದಷ್ಟೇ ಆನೆ ದಂತ ಮಾರುತ್ತಿದ್ದವರ ಸೆರೆ
ಕೆಲವು ದಿನಗಳ ಹಿಂದಷ್ಟೇ ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿ 15 ಕೆ.ಜಿ 5 ಕೆ.ಜಿ. ತೂಕದ ಎರಡು ಆನೆ ದಂತಗಳನ್ನು ವಶಪಡಿಸಿಕೊಂಡಿದ್ದರು.ಹಾಸನ ಮೂಲದ ಮೂವರು ಆರೋಪಿಗಳು, ಕಾಡಿನಲ್ಲಿ ನಾನಾ ಕಾರಣಗಳಿಗೆ ಮೃತಪಡುವ ಆನೆಗಳ ದಂತಗಳನ್ನು ಮಾರಾಟ ಮಾಡಲು ಯತ್ನಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. “” ಚಿರತೆ ಚರ್ಮ ಮಾರಾಟ ಸಂಬಂಧ ಮೂವರು ಆರೋಪಿಗಳ ಬಂಧನ ಪ್ರಕರಣಕ್ಕೆ  ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಅವರ ಬಳಿ ಚರ್ಮ ಖರೀದಿಸಲು ಯಾರಾದರೂ ಮುಂದಾಗಿದ್ದರೇ, ಅಥವಾ ವ್ಯವಸ್ಥಿತ ಜಾಲವಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next