Advertisement

ಪ್ರಧಾನಿ ದಿಟ್ಟ ನಿರ್ಧಾರದಿಂದ ಕಾಶ್ಮೀರಿಗರಿಗೆ ನೆಮ್ಮದಿ

06:09 PM Sep 22, 2019 | Naveen |

ಬಳ್ಳಾರಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದಿಟ್ಟ ನಿರ್ಧಾರದಿಂದ ಜಮ್ಮು-ಕಾಶ್ಮಿರ್‌ದಲ್ಲಿ ದೇಶ ಪ್ರೇಮಿಗಳು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್‌ ಹೇಳಿದರು.

Advertisement

ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಕಾಲೇಜು ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಐಕ್ಯತಾ ಅಭಿಯಾನ ನಿಮಿತ್ತ ಹಮ್ಮಿಕೊಂಡಿದ್ದ ಒಂದು ರಾಷ್ಟ್ರ-ಒಂದು ಸಂವಿಧಾನ ಜನಜಾಗೃತಿ ಸಭೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.

ದೇಶದ ಎಲ್ಲ ನಾಗರಿಕರ, ಮತದಾರರ ಆರ್ಶಿವಾದದಿಂದ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ಪಕ್ಷದ ಅನೇಕ ಮಹನೀಯರು ಹಾಗೂ ದೇಶದ ಜನರ ಅಪೇಕ್ಷೆಯಂತೆ ಕಾಶ್ಮೀರದಲ್ಲಿ 370 ಕಾಯ್ದೆ ರದ್ದು ಮಾಡಲು ಸಹಕಾರಿಯಾಗಿದೆ ಎಂದರು.

ಸ್ವಾತಂತ್ರ್ಯದ ಬಳಿಕ ಪಕ್ಷದ ಮಹಾನ್‌ ನಾಯಕರಾದ ಶ್ಯಾಮಪ್ರಕಾಶ್‌ ಮುಖರ್ಜಿ ಅವರು 370ರದ್ದತಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದಿನಿಂದ ಆರಂಭಗೊಂಡ ಈ ಹೋರಾಟಕ್ಕೆ ಮೋದಿಜೀ ಅವರ ನೇತೃತ್ವದ ಸರ್ಕಾರದಲ್ಲಿ ಯಶಸ್ಸು ಸಿಕ್ಕಿದೆ, ಸರ್ಕಾರದ ಈ ಮಹತ್ವ ಕಾರ್ಯಕ್ಕೆ ದೇಶದ ಎಲ್ಲ ಜನರಿಂದ ಅಭೂತಪೂರ್ವ ಸ್ವಾಗತ ದೊರೆತಿದೆ. ನಮ್ಮನಿಮ್ಮೆಲ್ಲರ ಈ ಹೋರಾಟಕ್ಕೆ ಇಂದು ಮುಕ್ತಿ ಸಿಕ್ಕಂತಾಗಿದೆ ಎಂದರು.

ಪ್ರಧಾನ ಮಂತ್ರಿ ಮೋದಿಜೀ ಅವರ ನೇತೃತ್ವದ ಈ ಸರ್ಕಾರದ ಗೃಹಸಚಿವ ಅಮಿತ್‌ ಶಾ ಅವರ ದಿಟ್ಟ ನಿರ್ಧಾರವೂ ಅಡಗಿದ್ದು, ಈ ಮಹತ್ವದ ಕಾರ್ಯಕ್ಕೆ ಆನೆ ಬಲ ಬಂದಂತಾಗಿದೆ. ವ್ಯಾಪ್ತಿಯ 5ರಿಂದ 6ಪೊಲೀಸ್‌ ಠಾಣೆಗಳನ್ನು ಹೊರತುಪಡಿಸಿದರೆ ಇಂದು ಜಮ್ಮು ಕಾಶ್ಮೀರ್‌ ನೆಮ್ಮದಿಯಾಗಿದೆ ಎಂದರು.

Advertisement

ಕುಡಚಿ ಶಾಸಕ ರಾಜು ಕುಡಚಿ ಅವರು ಮಾತನಾಡಿ, ಇಲ್ಲಿವರೆಗೆ ಜಮ್ಮು ಕಾಶ್ಮೀರವೇ  ಬೇರೆ ಭಾರತವೇ ಬೇರೆ ಎನ್ನುವ ಕಾನೂನು ಇತ್ತು. ಅದು ಕೇಂದ್ರದ ಮೋದಿಜೀ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಿತ್ತೋಗೆಯಲಾಗಿದೆ. ಮೋದಿಜೀ ಹಾಗೂ ಅಮೀತ್‌ ಶಾ ಅವರ ಕಾರ್ಯವೈಖರಿಗೆ ದೇಶದ ಎಲ್ಲ ವರ್ಗದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಮುಖ್ಯ ವಕ್ತಾರರಾದ ಶ್ರೀಕಾಂತ ಕುಲಕರ್ಣಿ ಅವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರ್ಕಾರ 370 ರದ್ದತಿಗೆ ಸೇರಿದಂತೆ ಇಲ್ಲಿವರೆಗೆ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲವೂ ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಬಿಜೆಪಿ ಎಂದಿಗೂ ಅಧಿ ಕಾರ ಬಯಸೋಲ್ಲ, ದೇಶದ ಅಭಿವೃದ್ಧಿ ಮುಖ್ಯ. ಜಗತ್ತಿನಲ್ಲೇ ದೇಶವನ್ನು ಮೊದಲ ಸ್ಥಾನದಲ್ಲಿ ಕೊಂಡೊಯ್ಯುವುದೇ ನಮ್ಮ ಬಿಜೆಪಿ ಗುರಿಯಾಗಿದೆ ಎಂದರು.

ಸಂಸದ ವೈ. ದೇವೇಂದ್ರಪ್ಪ, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್‌ ಮಾತನಾಡಿದರು. ಅಭಿಯಾನದ ಸಂಚಾಲಕಿ ಡಾ| ಅರುಣಾ ಕಾಮಿನೇನಿ, ಸಹ ಸಂಚಾಲಕಿ ಎಚ್‌. ವಿಜಯಲಕ್ಷ್ಮೀ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ. ರಾಮಲಿಂಗಪ್ಪ, ಮುರಹರಗೌಡ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅನಿಲ್‌ ನಾಯ್ಡು ಸೇರಿದಂತೆ ವಿವಿಧ ಮುಖಂಡರು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next