Advertisement

ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಮಾರುಕಟ್ಟೆಗೆ ತರಬೇಡಿ: ಬಳ್ಳಾರಿ ಜಿಲ್ಲಾಧಿಕಾರಿ ಮನವಿ

09:41 AM Mar 28, 2020 | keerthan |

ಬೆಳಗಾವಿ: ಜಿಲ್ಲೆಯ ರೈತರು ತರಕಾರಿ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಮಾರುಕಟ್ಟೆಗೆ ತರುವುದರಿಂದ ಹೆಚ್ಚಿನ ಜನಸಂದಣಿ ಉಂಟಾಗುತ್ತಿದೆ. ಆದ್ದರಿಂದ ರೈತರು ಆಯಾ ತಾಲ್ಲೂಕಿನ ಎಪಿಎಂಸಿ ಅಥವಾ ಸ್ಥಳೀಯ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್-19 ಹರಡದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ರೈತರು ತರಕಾರಿ ಮತ್ತಿತರ ಕೃಷಿ ಉತ್ಪನ್ನಗಳನ್ನು ಜಿಲ್ಲಾ ಎಪಿಎಂಸಿ ಪ್ರಾಂಗಣಕ್ಕೆ ತರುತ್ತಿರುವುದರಿಂದ ಇಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ರೈತರು ಜಿಲ್ಲಾ ಕೇಂದ್ರ ಸ್ಥಾನಕ್ಕೆ ಆಗಮಿಸದೇ ಆಯಾ ತಾಲ್ಲೂಕಿನ ಮಾರುಕಟ್ಟೆಗೆ ತಮ್ಮ ಉತ್ಪನ್ನಗಳನ್ನು ಸಾಗಿಸಬೇಕು ಎಂದು ತಿಳಿಸಿದ್ದಾರೆ.

ಜಿಲ್ಲಾ ಮುಖ್ಯ ಎಪಿಎಂಸಿ ಪ್ರಾಂಗಣದಲ್ಲಿ ಮಾರಾಟಗಾರರಿಗೆ ನಿರ್ದಿಷ್ಟ ಸ್ಥಳಗಳನ್ನು ಒದಗಿಸಲಾಗಿದೆ. ಮಾರಾಟಗಾರರು ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ವ್ಯಾಪಾರ ನಡೆಸಬೇಕು. ಇದನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಕೂಡ ನಿಯಮಾವಳಿ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರು ನೇರವಾಗಿ ಎಪಿಎಂಸಿ ಪ್ರವೇಶಿಸುವುದನ್ನು ಕೂಡ ನಿಷೇಧಿಸಲಾಗಿದೆ. ಹಾಪ್ ಕಾಮ್ಸ್ ಹಾಗೂ ವರ್ತಕರ ಸಂಘದ ವತಿಯಿಂದ ತರಕಾರಿ ಮಾರಾಟಗಾರರಿಗೆ ಗಾಡಿ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಪ್ರಾಂಗಣದಿಂದ ತಳ್ಳುಗಾಡಿ ಮತ್ತಿತರ ವಾಹನಗಳ ಮೂಲಕ ತಮ್ಮ ತಮ್ಮ ಬಡಾವಣೆಗೆ ಬರುವ ವ್ಯಾಪಾರಿಗಳಿಂದಲೇ ಸಾರ್ವಜನಿಕರು ತರಕಾರಿಗಳನ್ನು ಖರೀದಿಸಬೇಕು ಎಂದು ಅವರು ತಿಳಿಸಿದ್ದಾರೆ.

ದಿನನಿತ್ಯ ಬಳಕೆಯ ವಸ್ತುಗಳ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ನಾಗರಿಕರು ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ. ಲಾಕ್ ಡೌನ್ ಮಾರ್ಗಸೂಚಿಯ ಪ್ರಕಾರ ತಮ್ಮ ಮನೆಯಲ್ಲೇ ಉಳಿದುಕೊಂಡು ಕೋವಿಡ್-19 ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next