Advertisement

ಬಳ್ಳಾರಿ: ಆಸ್ಪತ್ರೆಯಿಂದ ವಿಚಾರಣಾಧೀನ ಖೈದಿ ಪರಾರಿ

09:54 PM May 06, 2022 | Team Udayavani |

ಬಳ್ಳಾರಿ: ನಗರದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಖೈದಿ ಶುಕ್ರವಾರ ಬೆಳಗಿನ ಜಾವ ಪರಾರಿಯಾಗಿದ್ದಾನೆ.

Advertisement

ಚಂದ್ರಕಾಂತ್ (೨೨) ಪರಾರಿಯಾದ ವಿಚಾರಣಾಧೀನ ಖೈದಿ. ನೆರೆಯ ಕೊಪ್ಪಳ ಜಿಲ್ಲೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಚಂದ್ರಕಾಂತ್‌ಗೆ ಗುರುವಾರ ತಲೆಗೆ ಎನೋ ಪೆಟ್ಟುಬಿದ್ದಂತಾಗಿದ್ದು ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ಕೂಡಲೇ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಎಚ್ಚರಗೊಂಡಿದ್ದಾನೆ. ಆದರೂ, ಆ ಆಸ್ಪತ್ರೆಯಲ್ಲಿ ಸಿಟಿ ಸ್ಕಾನ್, ನರರೋಗ ತಜ್ಞವೈದ್ಯರು ಇಲ್ಲದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದೊಯ್ಯುವಂತೆ ವೈದ್ಯರು ನೀಡಿದ ಸಲಹೆ ಮೇರೆಗೆ, ಕೊಪ್ಪಳದಿಂದ ಗುರುವಾರ ರಾತ್ರಿ ೮.೩೦ರ ಸುಮಾರಿಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತಂದಿದ್ದ ಖೈದಿ ಚಂದ್ರಕಾಂತ್ ನನ್ನ ನೋಂದಾಯಿಸಿಕೊಂಡು ತಕ್ಷಣ ವಿಮ್ಸ್ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಅಲ್ಲಿಂದ ಸಮೀಪದ ಟಿಬಿ ಸ್ಯಾನಿಟೋರಿಯಂ ಆಸ್ಪತ್ರೆಗೆ ದಾಖಲಿಸಿ ಅಲ್ಲೂ ಚಿಕಿತ್ಸೆ ನೀಡಲಾಗಿದೆ.

ಶುಕ್ರವಾರ ಬೆಳಗಿನ ಜಾವ ಬಹಿರ್ದೆಸೆಗೆ ಹೋಗುವ ನೆಪದಲ್ಲಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದ ಕಾರಾಗೃಹದ ಅಧಿಕಾರಿಗಳು, ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next