Advertisement

ಮಳೆ-ನೆರೆಯಿಂದ 144 ಮನೆಗಳಿಗೆ ಹಾನಿ

02:46 PM Aug 10, 2019 | Team Udayavani |

ಬಳ್ಳಾರಿ: ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳ ಮತ್ತು ಕೆಲ ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆಗೆ ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 144 ಮನೆಗಳ ತಡೆಗೋಡೆ, ಮೇಲ್ಛಾವಣಿ ಕುಸಿತವಾಗಿವೆ. ಮುಂಜಾಗ್ರತಾ ಕ್ರಮವಹಿಸಿದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Advertisement

ತುಂಗಾ ಮತ್ತು ಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರ ಬಿಡುತ್ತಿರುವುದರಿಂದ ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗಿದ್ದು, 1.42 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಪರಿಣಾಮ ಹರಪನಹಳ್ಳಿ, ಹಡಗಲಿ, ಹ.ಬೊ.ಹಳ್ಳಿ ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ನೆರೆಹಾವಳಿ ಬಂದಿದ್ದು, ಹೂವಿನಹಡಗಲಿಯಲ್ಲಿ 98, ಹರಪನಹಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 45 ಮನೆಗಳು ಹಾನಿಗೊಳಗಾಗಿವೆ. ಕಳೆದ ಒಂದು ವಾರದಿಂದ ನಿರಂತರ ಜಿಟಿಜಿಟಿ ಮಳೆಯಿಂದ ಕೂಡ್ಲಿಗಿಯಲ್ಲಿ 1 ಮನೆ ಸೇರಿ ಒಟ್ಟು 144 ಮನೆಗಳು ಹಾನಿಗೊಳಗಾಗಿವೆ. ಇನ್ನು ಹರಪನಹಳ್ಳಿ ತಾಲೂಕಿನಲ್ಲಿ ನೆರೆಹಾವಳಿಯಿಂದ ಹಲವಾಗಲು ಮತ್ತು ಗರ್ಭಗುಡಿ ಗ್ರಾಮದ ಸಂಪರ್ಕ ರಸ್ತೆ ಮುಳುಗಡೆಯಾಗಿದೆ. ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಡಳಿತದ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

98 ಮನೆಗಳಿಗೆ ಹಾನಿ: ತಾಲೂಕಿನ ಕುರುವತ್ತಿಯಲ್ಲಿ 15 ಭಾಗಶಃ ಕುಸಿದರೆ, 10 ಕಚ್ಚಾ ಮನೆಗಳು ಸೇರಿದಂತೆ ಒಟ್ಟಾರೆ 25 ಮನೆಗಳಿಗೆ ಹಾನಿಯಾಗಿದೆ. ಹರವಿಯಲ್ಲಿ 10 ಮನೆಗಳು ಭಾಗಶಃ ಕುಸಿದಿವೆ. ಹರವಿ ಸಿದ್ದಾಪುರ-3, ಲಿಂಗನಾಯ್ಕನಹಳ್ಳಿ-4, ಹಿರೆಬನ್ನಿ ಮಟ್ಟಿ-5, ನಡವಿನಹಳ್ಳಿ-2 (ತೀವ್ರ ಕಚ್ಚಾಮನೆ), ದಾಸನಹಳ್ಳಿ-3, ಹೊಳಲು-3, ಮಕರಬ್ಬಿ-5, ಹಿರೇಹಡಗಲಿ ಹೋಬಳಿ-60, ವರಕನ-1, ಉತ್ತಂಗಿ-2, ಇಟಗಿ-3, ಮಾಗಳ-2, ನಾಗತಿ ಬಸಾಪುರ-6, ನವಲಿ-4, ಹಿರೇಕೊಳಚೆ-4, ಕೊಂಬಲಿ-3, ಕೆ.ಅಯ್ಯನಹಳ್ಳಿ-2, ಬೀರಬ್ಬಿ-6, ಕಾಲ್ವಿ-2, ದಾಸರಹಳ್ಳಿ-6, ಹಡಗಲಿ ಹೋಬಳಿ-35 ಮನೆಗಳು ಸೇರಿದಂತೆ ಹಡಗಲಿ ತಾಲೂಕಿನಲ್ಲಿ ಅಂದಾಜು 98ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿರುವ ಕುರಿತು ವರದಿಯಾಗಿದೆ. ಜನ- ಜಾನುವಾರುಗಳಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಆಯಾ ತಾಲೂಕು ತಹಶೀಲ್ದಾರ್‌ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.

ಹಡಗಲಿ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆ ಮತ್ತು ನೆರೆಹಾವಳಿಯಿಂದಾಗಿ ಹೊಲ, ಗದ್ದೆಗಳು ಜಲಾವೃತಗೊಂಡಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ರೈತಾಪಿ ವರ್ಗ ಮಾತ್ರ ಈ ಮಳೆಯಿಂದ ಅಪಾರ ಪ್ರಮಾಣದ ಬೆಳೆನಷ್ಟವಾಗಿದ್ದು, ಲಕ್ಷಾಂತರ ರೂ.ಗಳ ಮೌಲ್ಯದ ಬೆಳೆಹಾನಿ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ಬರದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಆಗೊಮ್ಮೆ, ಹೀಗೊಮ್ಮೆ ಸುರಿದ ಜಿಟಿಜಿಟಿ ಹಾಗೂ ತುಂತುರು ಮಳೆಯ ನೀರಿನ ತೇವಾಂಶದಲ್ಲೇ ಬೆಳೆಗಳನ್ನು ಬೆಳೆಯಲಾಗಿತ್ತಾದರೂ, ಅದು ಕೈಗೆಟುಕುವ ಮುನ್ನವೇ ಮಳೆಯಿಂದ ಜಲಾವೃತಗೊಂಡು ಬೆಳೆಹಾನಿ ಉಂಟಾಗಿರೋದು ರೈತರಲ್ಲಿ ಆತಂಕ ಮೂಡಿಸಿದೆ. ಇದರಿಂದ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಮುಂಜಾಗ್ರತಾ ಕ್ರಮ: ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯ ಭರ್ತಿಗೆ ಇನ್ನು ಕೇವಲ 10 ಅಡಿಗಳಷ್ಟು ಮಾತ್ರ ಬಾಕಿ ಇದೆ. ಸದ್ಯ 1.42 ಲಕ್ಷ ಕ್ಯೂಸೆಕ್‌ ಒಳಹರಿವಿನ ಪ್ರಮಾಣ ಹೀಗೆ ಮುಂದುವರಿದರೆ ಇನ್ನು ಕೇವಲ ನಾಲ್ಕೈದು ದಿನಗಳಲ್ಲಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಹೀಗಾಗಿ ಜಲಾಶಯದ ಮುಂದಿನ ಭಾಗದ ಹೊಸಪೇಟೆ, ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕುಗಳಲ್ಲಿ ನೆರೆಹಾವಳಿ ಎದುರಿಸುವ ನದಿಪಾತ್ರದ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಆಯಾ ತಾಲೂಕುಗಳ ತಹಶೀಲ್ದಾರರಿಗೆ ಸೂಚಿಸಿದೆ. ಜತೆಗೆ ನದಿಯಿಂದ ಕನಿಷ್ಠ 100 ರಿಂದ 200 ಮೀಟರ್‌ ಅಂತರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವಂತೆ ಪೊಲೀಸ್‌ ಇಲಾಖೆಗೂ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

Advertisement

ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಹ.ಬೊ. ಹಳ್ಳಿ ತಾಲೂಕಿನ ನದಿಪಾತ್ರದಲ್ಲಿ ನೆರೆಹಾವಳಿಯಿಂದ ಬಾಧಿತವಾಗುವ ನದಿಪಾತ್ರದ ಗ್ರಾಮಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅಧಿಕಾರಿಗಳಿಗೂ ಸಹ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ನೆರೆಹಾವಳಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತಾ ಕ್ರಮಗಳನ್ನು ಕೈಗೊಂಡಿದೆ. ನಾನು ಸಹ ಅಧಿಕಾರಿಗಳ ತಂಡದೊಂದಿಗೆ ಹರಪನಹಳ್ಳಿ, ಹಡಗಲಿ, ಹ.ಬೊ.ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ.
ಎಸ್‌.ಎಸ್‌. ನಕುಲ್, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next