ಬಳ್ಳಾರಿ: ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ಕೇವಲ ವಾಲ್ಮೀಕಿ ಸಮುದಾಯದ ಬೇಡಿಕೆ ಅಲ್ಲ. ಎಲ್ಲ ಸಮುದಾಯಗಳ ಆಸೆಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷ ನನ್ನನ್ನು ಗುರುತಿಸಲಿದೆ ಎನ್ನುವ ಮೂಲಕ ಆರೋಗ್ಯ ಸಚಿವ ಬಿ. ಶ್ರೀರಾಮುಲು ಡಿಸಿಎಂ ಆಗಬೇಕೆಂಬ ಮನದಾಳದ ಇಂಗಿತವನ್ನು ಮತ್ತೂಮ್ಮೆ ಬಹಿರಂಗ ಪಡಿಸಿದರು.
ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ತ ನಗರದ ಎಸ್ಪಿ ವೃತ್ತದಲ್ಲಿನ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಬಿ.ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಹೇಳಿಕೆ ಕುರಿತ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಮುಲು, ಸ್ವಾಮೀಜಿಗಳ ಹೇಳಿಕೆಗೆ ನಾನು ಉತ್ತರಿಸಲ್ಲ. ನಾನು ಡಿಸಿಎಂ ಆಗಬೇಕೆಂಬುದು ಕೇವಲ ವಾಲ್ಮೀಕಿ ಸಮುದಾಯದ ಬೇಡಿಕೆ ಮಾತ್ರವಲ್ಲ. ಎಲ್ಲ ಸಮುದಾಯಗಳ ಆಸೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಪಕ್ಷ ನನ್ನನ್ನು ಗುರುತಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮಾಜಿ ಡಿಸಿಎಂ ಡಾ| ಜಿ.ಪರಮೇಶ್ವರ ಆಪ್ತ ಸಹಾಯಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ, ಸಿಬಿಐ ಅಧಿಕಾರಿಗಳ ದಾಳಿಯಲ್ಲಿ ಬಿಜೆಪಿ ಪಾತ್ರವಿಲ್ಲ. ಬಿಜೆಪಿ ಕೇಂದ್ರ ಸಚಿವ ಸಿದ್ದೇಶ್ವರ್ ಅವರ ಭಾವನ ಮೇಲೂ ದಾಳಿ ನಡೆದಿಲ್ವೇ? ಮೆಡಿಕಲ್ ಸೀಟು ಹಗರಣದ ಬಗ್ಗೆ ದಾಳಿ ನಡೆಯುತ್ತಿದೆ. ತನಿಖೆಗೆ ಸಹಕಾರ ನೀಡಬೇಕು. ಆದರೆ, ಪಿಎ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರದ ಮೇಲೆ ಹಾಕೋದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುವ ಬಗ್ಗೆ ಶಾಶ್ವತ ಪರಿಹಾರ ನೀಡುವುದಾಗಿ ತಿಳಿಸಿದ ಸಚಿವರು, ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರಿಗೆ ಸರ್ಕಾರಿ ಕೆಲಸ ಮಾಡಲಾಗಲಿಲ್ಲ ಎಂದರೆ ಕೆಲಸ ಬಿಟ್ಟು ಹೋಗಲಿ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ನಗರದ ಎಸ್ಪಿ ವೃತ್ತದಲ್ಲಿನ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಂದಿನ ಹಾಲಿ ಸಿಎಂ ಯಡಿಯೂರಪ್ಪ ಅವರೇ ವಾಲ್ಮೀಕಿ ಜಯಂತಿಯನ್ನು ಘೋಷಿಸಿದ್ದರು. ಇದೀಗ ಎಸ್‌ಟಿ ಸಮುದಾಯಕ್ಕೆ ಶೇ. 7.5ರಷ್ಟು ಮಿಸಲಾತಿ ಸೌಲಭ್ಯ ಸಿಗಬೇಕಿತ್ತು. ಆದರೆ, ನ್ಯಾ. ನಾಗಮೋಹನ್ ದಾಸ್ ಅವರು ವರದಿ ಸಲ್ಲಿಸಿಲ್ಲ. ವರದಿ ಬಗ್ಗೆ ಚರ್ಚಿಸಲಾಗಿದೆ. ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ಶೇ.7.5 ಮೀಸಲಾತಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.