Advertisement

ಬಳ್ಳಾರಿ ಸಂಸದರ ಪರ ನಿಲ್ಲುತ್ತಿದ್ದ ಸುಷ್ಮಾ

10:54 AM Aug 08, 2019 | Naveen |

ಬಳ್ಳಾರಿ: ಸಾಮೂಹಿಕ ವಿವಾಹ, ವರಮಹಾಲಕ್ಷ್ಮೀಪೂಜೆಗೆಂದು ಪ್ರತಿವರ್ಷ ಬಳ್ಳಾರಿಗೆ ಆಗಮಿಸುತ್ತಿದ್ದ ಮಾಜಿ ವಿದೇಶಾಂಗ ಸಚಿವೆ ದಿ.ಸುಷ್ಮಾಸ್ವರಾಜ್‌, ಜಿಲ್ಲೆಯಲ್ಲಿ ಬಳ್ಳಾರಿಯ ಮಗಳೆಂದೇ ಗುರುತಿಸಿಕೊಂಡಿದ್ದರು. ಬಳ್ಳಾರಿಯೊಂದಿಗೆ ಅವಿನಾಭಾವ ಸಂಬಂಧಹೊಂದಿದ್ದ ಅವರು, ಲೋಕಸಭೆಯಲ್ಲೂ ಬಳ್ಳಾರಿ ಸಂಸದರಿಗೆ ಅಷ್ಟೇ ಬೆಂಬಲಕ್ಕೆ ನಿಲ್ಲುತ್ತಿದ್ದರು.

Advertisement

ದಶಕದ ಕಾಲ ಸಾಮೂಹಿಕ ವಿವಾಹ, ವರಮಹಾಲಕ್ಷ್ಮೀ ಪೂಜೆಗೆಂದು ಬಳ್ಳಾರಿಗೆ ಆಗಮಿಸುತ್ತಿದ್ದ ಸುಷ್ಮಾಸ್ವರಾಜ್‌ ಅವರು, ಇಲ್ಲಿನ ರಾಜಕೀಯ ಮಂದಿ, ಜನರಿಗೆ ಚಿರಪರಿಚಿತರಾಗಿದ್ದರು. ಬಳ್ಳಾರಿಯೊಂದಿಗೆ ಅಷ್ಟೊಂದು ನಂಟು ಹೊಂದಿದ್ದ ಸುಷ್ಮಾಸ್ವರಾಜ್‌ ಅವರು, ಲೋಕಸಭೆಯಲ್ಲಿ ಬಳ್ಳಾರಿ ಸಂಸದರ ಬೆಂಬಲಕ್ಕೂ ನಿಲ್ಲುತ್ತಿದ್ದರು. ಮಾಜಿ ಸಂಸದೆ ಶಾಂತಾ ಅವರು ಲೋಕಸಭೆಯಲ್ಲಿ ಮಾತನಾಡುತ್ತಿದ್ದಾಗ ಅಪಹಾಸ್ಯ ಮಾಡಿದ್ದ ಸಂಸದರ ವಿರುದ್ಧ ಕ್ರಮಕೈಗೊಳ್ಳುವಂತೆ ಅಂದಿನ ಸ್ಪೀಕರ್‌ ಅವರಿಗೆ ಮನವಿ ಮಾಡಿಕೊಳ್ಳುವ ಮೂಲಕ ಅವರನ್ನು ಸ್ಪೀಕರ್‌ ಮೂಲಕ ಲೋಕಸಭೆಯಿಂದ ತಾತ್ಕಾಲಿಕವಾಗಿ ಅಮಾನತಾಗುವಂತೆ ಕ್ರಮಕೈಗೊಂಡಿದ್ದರು.

ಹಿನ್ನೆಲೆ: ಅದು 2011-2012ರ ಮಧ್ಯಾವ. ಅಕ್ರಮ ಗಣಿಗಾರಿಕೆ ಆರೋಪದಿಂದ ಮಾಜಿ ಸಚಿವ ಜನಾರ್ದನರೆಡ್ಡಿಯವರು ಸಿಬಿಐ ಬಂಧನಕ್ಕೊಳಗಾಗಿರುತ್ತಾರೆ. ಅಂತಹ ಸಮಯದಲ್ಲಿ ಅಂದಿನ ಬಳ್ಳಾರಿ ಸಂಸದೆಯಾಗಿದ್ದ ಶಾಸಕ ಬಿ.ಶ್ರೀರಾಮುಲು ಸಹೋದರಿ ಜೆ.ಶಾಂತಾ ಅವರು, ಲೋಕಸಭೆ ಅವೇಶನದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿದ್ದರು. ಮಾತೃಭಾಷೆಯಲ್ಲದ ಹಿಂದಿಯಲ್ಲಿ ಅಷ್ಟಾಗಿ ಸ್ಪಷ್ಟವಾಗಿ ಮಾತನಾಡಲು ಬಾರದ ಜೆ.ಶಾಂತಾ ಅವರು, ಕೆಲವೊದು ವಿಷಯಗಳನ್ನು ಪ್ರಸ್ತಾಪಿಸುವಾಗ ಸ್ವಲ್ಪ ಗಾಬರಿಗೊಂಡರು. ಇದನ್ನೇ ಉತ್ತರ ಭಾರತದ ಕಾಂಗ್ರೆಸ್‌ ಸಂಸದ ಸುರೇಶ್‌ ಎನ್ನುವವರು ಅಪಹಾಸ್ಯ ಮಾಡಿ ಅಸಂವಿಧಾನಿಕ ಶಬ್ದಗಳನ್ನು ಬಳಸಿದ್ದರು. ಸಂಸದರ ಆ ಮಾತುಗಳು ಶಾಂತಾ ಅವರನ್ನು ಬಾಸಿತ್ತು. ಗ್ರಾಮೀಣ ಭಾಗದಿಂದ ಬಂದಂತಹ ನಮಗೆ ಅವರ ಅಸಂವಿಧಾನಿಕ ಮಾತುಗಳನ್ನು ಕೇಳಿ ದುಃಖವಾಯಿತು. ಆಗ ಹತ್ತಿರಕ್ಕೆ ಬಂದ ಸುಷ್ಮಾಸ್ವರಾಜ್‌ ಅವರು, ಗ್ರಾಮೀಣ ಭಾಗದಿಂದ ಬಂದಿರುವ ನಿಮಗೆ ಇದೆಲ್ಲ ತಿಳಿದಿರಲ್ಲ. ಇದೆಲ್ಲ ಸಹಜ. ಏನೂ ಆಗಲ್ಲ. ನಾನಿದ್ದೇನೆ ಎಂದು ಬೆಂಬಲಿಸಿದ್ದರು. ಅವರ ಮಾತುಗಳನ್ನು ಕೇಳಿದಾಕ್ಷಣ ನನಗೆ ಕಣ್ಣೀರು ತಡೆಯಲಾಗಲಿಲ್ಲ ಎಂದು ಮಾಜಿ ಸಂಸದೆ ಜೆ.ಶಾಂತಾ ಸ್ಮರಿಸಿದರು.

ಘಟನೆಯಾದ ಮರುದಿನ ಸುಷ್ಮಾಸ್ವರಾಜ್‌ ಅವರು, ಪುನಃ ನನ್ನನ್ನು ಅಂದಿನ ಸ್ಪೀಕರ್‌ ಆಗಿದ್ದ ಮೀರಾಕುಮಾರ್‌ ಅವರ ಕಚೇರಿಗೆ ಕರೆದುಕೊಂಡು ಹೋದರು. ಅಲ್ಲಿ ಹಿಂದಿನ ದಿನ ಲೋಕಸಭೆಯಲ್ಲಿ ನಡೆದಿದ್ದ ಘಟನೆಯ ಬಗ್ಗೆ ಅವರೇ ವಿವರಿಸಿದರು. ಶಾಂತಾಗೆ ಏನು ಗೊತ್ತಿಲ್ಲ ಅಮಾಯಕರು. ಗ್ರಾಮೀಣ ಭಾಗದಿಂದ ಬಂದವರು. ಅವರಿಗೆ ಇಲ್ಲಿ ಯಾರು ಇಲ್ಲ ಎಂದು ಕಾಂಗ್ರೆಸ್‌ ಸಂಸದರು ಈ ರೀತಿ ಅಪಹಾಸ್ಯ ಮಾಡಿ ಅಸಾಂವಿಧಾನಿಕ ಶಬ್ದಗಳನ್ನು ಬಳಿಸಿದ್ದಾರೆ. ಶಾಂತಾರಿಗೆ ನಾನಿದ್ದೇನೆ ಎಂದು ಬೆಂಬಲಕ್ಕೆ ನಿಂತಿದ್ದರು. ಬಳಿಕ ಸ್ಪೀಕರ್‌ ಮೀರಾ ಕುಮಾರ್‌ ಅವರು, ಅವೇಶನದಲ್ಲಿ ಶಾಂತಾ ಅವರು ಮಾತನಾಡುವಾಗ ಸಂಸದರು ಅಪಹಾಸ್ಯ ಮಾಡುವಾಗ ಸ್ಪೀಕರ್‌ ಸ್ಥಾನದಲ್ಲಿ ಇದ್ದವರು ಏನು ಮಾಡುತ್ತಿದ್ದರು ಎಂದು ಆಗ ಸ್ಪೀಕರ್‌ ಸ್ಥಾನದಲ್ಲಿದ್ದ ಕೇರಳದ ಎಂಪಿ ಅವರನ್ನು 15 ದಿನಗಳ ಕಾಲ ಸ್ಪೀಕರ್‌ ಸ್ಥಾನದಲ್ಲಿ ಕೂಡದಂತೆ ಅಮಾನತು ಮಾಡಿದ್ದರು. ನಂತರ ಅಪಹಾಸ್ಯ ಮಾಡಿದ್ದ ಸಂಸದ ಸುರೇಶ್‌ ಅವರ ಮೇಲೂ ಕ್ರಮಕೈಗೊಳ್ಳಲಾಯಿತು ಎಂದು ಲೋಕಸಭೆಯಲ್ಲಿ ಸುಷ್ಮಾಸ್ವರಾಜ್‌ ಅವರು ನೀಡಿದ್ದ ಸಹಕಾರ, ಬೆಂಬಲದ ಬಗ್ಗೆ ಮೆಲುಕು ಹಾಕಿದರು.

ಸುಷ್ಮಾಸ್ವರಾಜ್‌ ಅವರು ಕೇವಲ ಈ ವಿಷಯದಲ್ಲಿ ಮಾತ್ರವಲ್ಲ. ಎಲ್ಲ ವಿಷಯದಲ್ಲೂ ಸಹಕಾರ ನೀಡುತ್ತಿದ್ದರು. ಬಳ್ಳಾರಿ ಲೋಕಸಭೆ ಸದಸ್ಯೆಯಾಗಿ ದೆಹಲಿಗೆ ಹೋದಾಕ್ಷಣ ಅಲ್ಲಿ ನನಗೆ ಯಾರೊಬ್ಬರ ಪರಿಚಯ ಇರಲಿಲ್ಲ. ಎಲ್ಲರೂ ಅಪರಿಚಿತರು. ಆಗ ಸುಷ್ಮಾಸ್ವರಾಜ್‌ ಒಬ್ಬರೇ ನನಗೆ ಪರಿಚಿತರು. ನಾನು ಲೋಕಸಭೆಗೆ ಹೋದಾಗ ಒಬ್ಬ ತಾಯಿಯಾತಿ ನನ್ನನ್ನು ಮುನ್ನಡೆಸುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ನನಗೆ ಅವರೇ ಮಾರ್ಗದರ್ಶಕರಾಗಿದ್ದರು. ಇಂದು ಅವರು ಇಲ್ಲ ಎಂಬುದನ್ನು ಅರಗಿಸಿಕೊಳ್ಳು ಆಗುತ್ತಿಲ್ಲ. ಸ್ವಂತ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗುತ್ತಿದೆ ಎಂದು ಬಳ್ಳಾರಿ ಮತ್ತು ದೆಹಲಿಯಲ್ಲಿ ಸುಷ್ಮಾಸ್ವರಾಜ್‌ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.

Advertisement

ಬಳ್ಳಾರಿಯಿಂದ ಸಂಸದರಾಗಿ ದೆಹಲಿಗೆ ಹೋದಾಗ ನನಗೆ ಸುಷ್ಮಾಸ್ವರಾಜ್‌ ಒಬ್ಬರೇ ಪರಿಚಿತರಾಗಿದ್ದರು. ಪ್ರತಿಯೊಂದು ವಿಷಯದಲ್ಲೂ ನನಗೆ ಅವರು ಮಾರ್ಗದರ್ಶಕರಾಗಿದ್ದರು. ಇಂದು ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಒಬ್ಬ ತಾಯಿಯನ್ನು ಕಳೆದುಕೊಂಡಷ್ಟು ದುಃಖವಾಗುತ್ತಿದೆ.
ಜೆ.ಶಾಂತಾ,
ಮಾಜಿ ಸಂಸದೆ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next