Advertisement

ವಿವಿ ನೇಮಕಾತಿ ಅಕ್ರಮ ತಡೆಗೆ ಆಗ್ರಹ

05:20 PM May 29, 2019 | Naveen |

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಶೀಘ್ರದಲ್ಲೇ ಎಬಿವಿಪಿ ನೇತೃತ್ವದಲ್ಲಿ ರಾಜ್ಯಪಾಲರ ಬಳಿಗೆ ನಿಯೋಗ ತೆರಳಿ ನೇಮಕಾತಿಯನ್ನು ತಡೆಹಿಡಿಯುವಂತೆ ಒತ್ತಾಯಿಸಲಾಗುವುದು ಎಂದು ಎಬಿವಿಪಿ ಮುಖಂಡ ಅಡವಿಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಎಸ್‌ಕೆ ವಿವಿ ಕುಲಪತಿ ಎಂ.ಎಸ್‌.ಸುಭಾಷ್‌ ಅವರು, ನೇಮಕಾತಿಗಳನ್ನು ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ಮಾಡುತ್ತಿದ್ದಾರೆ. 2014ರಲ್ಲಿ ರಾಜ್ಯಪಾಲರು ಹೊರಡಿಸಿರುವ ಆದೇಶದಲ್ಲಿ ವಿವಿ ಕುಲಪತಿಗಳು ಅವಧಿ ಮುಕ್ತಾಯಕ್ಕೆ 6 ತಿಂಗಳ ಮುನ್ನವೇ ಎಲ್ಲ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ. ವಿವಿಯಿಂದ ನೇಮಕಾತಿಗಾಗಿ ಹೊರಡಿಸಲಾದ ಅಧಿಸೂಚನೆಗಳು ಆರು ತಿಂಗಳ ಮಟ್ಟಿಗೆ ಮಾತ್ರ ಚಾಲ್ತಿಯಲ್ಲಿರುತ್ತವೆ. ಅಷ್ಟರೊಳಗೆ ಮರು ಅಧಿಸೂಚನೆ ಹೊರಡಿಸಲು ಅವಕಾಶವಿರುತ್ತದೆ. ನಂತರ ಹೊರಡಿಸುವ ಎಲ್ಲ ಅಧಿಸೂಚನೆಗಳು ಹೊಸದಾಗಿ ಹೊರಡಿಸಬೇಕಾಗುತ್ತದೆ. ಯುಜಿಸಿ ನಿಯಮಗಳು ಪ್ರತಿ ಆರು ತಿಂಗಳಿಗೊಮ್ಮೆ ಬದಲಾವಣೆ ಯಾಗುವುದರಿಂದ ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿಗಳು ಸಹ ಬದಲಾವಣೆಯಾಗುತ್ತವೆ. ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿರುವ ಕುಲಪತಿ ಎಂ.ಎಸ್‌.ಸುಭಾಷ್‌ ಅವರು ಬೋಧಕ, ಬೋಧಕೇತರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಬೋಧಕ, ಬೋಧಕೇತರ ಹುದ್ದೆಗಳನ್ನು ಅಭ್ಯರ್ಥಿಗಳಿಂದ ಹಣ ಪಡೆದು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಕುಲಪತಿಗಳ ನೇರ ಸಂಬಂಧಿಗಳೇ ಧಾರವಾಡದಲ್ಲಿ ಕೂತು ಬೋಧಕ, ಬೋಧಕೇತರ ಹುದ್ದೆಗಳನ್ನು ಇಂತಿಷ್ಟು ಹಣಕ್ಕೆ ಅಭ್ಯರ್ಥಿಗಳೊಂದಿಗೆ ಡೀಲ್ ಮಾಡುತ್ತಿದ್ದಾರೆ. ಕುಲಪತಿಗಳ ಮೊಬೈಲ್ ಟ್ರ್ಯಾಪ್‌ ಮಾಡಿದರೆ ಎಲ್ಲವೂ ಬಹಿರಂಗವಾಗಲಿದೆ. ಹೀಗಾಗಿ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಎಸಿಬಿಗೆ ಎಬಿವಿಪಿ ವತಿಯಿಂದ ಸೋಮವಾರ ದೂರು ಸಲ್ಲಿಸಲಾಗಿದೆ. ಇದರೊಂದಿಗೆ ನೇಮಕಾತಿ ತಡೆಯುವಂತೆ ಇನ್ನೆರಡು ದಿನಗಳಲ್ಲಿ ಎಬಿವಿಪಿ ನೇತೃತ್ವದಲ್ಲಿ ರಾಜ್ಯಪಾಲರ ಬಳಿಗೆ ನಿಯೋಗ ತೆರಳಿ ಒತ್ತಾಯಿಸಲಾಗುತ್ತದೆ ಎಂದು ಎಚ್ಚರಿಸಿದರು.

ವಿಎಸ್‌ಕೆ ವಿವಿಯಲ್ಲಿ ನಡೆಯುತ್ತಿರುವ ನೇಮಕಾತಿಗೆ ಸಂಬಂಧಿಸಿದಂತೆ ಎವಿಬಿಪಿಗೆ ಮಾಹಿತಿ ನೀಡಿದ್ದೇನೆ ಎಂದು ಆರೋಪಿಸಿ ವಿವಿಯ ಆಡಳಿತ ವಿಭಾಗದಲ್ಲಿ ಗುತ್ತಿಗೆ ನೌಕರರನಾಗಿ ಕಾರ್ಯನಿರ್ವಹಿಸುತ್ತಿರುವ ಚಿದಾನಂದ ಎನ್ನುವವರಿಗೆ ಜಾತಿನಿಂದನೆ ಪ್ರಕರಣ ದಾಖಲಿಸುವುದಾಗಿ ಕುಲಪತಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ವಿವಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಚಿದಾನಂದ ಮತ್ತವರ ಸಂಬಂಧಿಕರನ್ನು ಏಕಾಏಕಿ ರಾತ್ರೋರಾತ್ರಿ ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಚಿದಾನಂದ ತಿಳಿಸಿದರು. ವಿವಿ ನೊಂದ ಅಭ್ಯರ್ಥಿ ಶ್ರೀವಾಣಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ವಿವಿ ಸಿಂಡಿಕೇಟ್ ಮಾಜಿ ಸದಸ್ಯೆ ವಿಜಯಲಕ್ಷ್ಮಿ, ಯುವರಾಜ್‌ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next