Advertisement

ರಾಬಕೋ ಒಕ್ಕೂಟಕ್ಕೆ  1.84 ಕೋಟಿ ರೂ. ನಿವ್ವಳ ಲಾಭ

05:46 PM Oct 06, 2019 | Naveen |

ಬಳ್ಳಾರಿ: ನಂದಿನಿ ಪ್ಲೆಕ್ಸಿ ‘ತೃಪ್ತಿ ಹಾಗೂ ಹೆಲ್ತಿಲೈಫ್‌’ ಹಾಲು ಹಾಗೂ ಇತರೆ ಹಾಲಿನ ಉತ್ಪನ್ನಗಳನ್ನು ಪ್ರತಿದಿನ ಗ್ರಾಹಕರಿಗೆ ಪರಿಚಯ ಹಾಗೂ ಮಾರಾಟ ಮಾಡಲು ರಾಬಕೋ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ. ಇದಕ್ಕಾಗಿ ನಂದಿನಿ ಗ್ರಾಮೀಣ ಸಂಚಾರಿ ವಾಹನ ಸಿದ್ಧಪಡಿಸಲಾಗಿದ್ದು, ಈ ವಾಹನ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಸಂಚರಿಸಲಿದೆ ಎಂದು ರಾಬಕೊ ಒಕ್ಕೂಟದ ಅಧ್ಯಕ್ಷ, ಶಾಸಕ ಭೀಮಾನಾಯ್ಕ ಹೇಳಿದರು.

Advertisement

ನಗರದ ರಾಬಕೊ ಒಕ್ಕೂಟದ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿನಿ ಸಂಚಾರ ವಾಹನದಿಂದ ಗ್ರಾಮೀಣ ಮತ್ತು ಪಟ್ಟಣಗಳಲ್ಲಿರುವ ಅಂಗಡಿ, ಬೇಕರಿ, ಹೊಟೇಲ್‌ ಹಾಗೂ ಗ್ರಾಹಕರಿಗೆ ಪ್ರತಿದಿನ ಒಂದೊಂದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಂಚರಿಸಿ ಮೈಕ್‌ ಮುಖಾಂತರ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಲಭ್ಯತೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುವುದು ಎಂದರು.

ಒಕ್ಕೂಟದ ಕೊಪ್ಪಳ ಜಿಲ್ಲೆ ಬೂದುಗುಂಪ ಕ್ರಾಸ್‌ನಲ್ಲಿರುವ ನೂತನ ಡೇರಿಯಲ್ಲಿ ಪ್ರತಿದಿನ ಆರವತ್ತು ಸಾವಿರ ಲೀಟರ್‌ ನಿಂದ ಒಂದು ಲಕ್ಷ ಲೀಟರ್‌ಗಳವರೆಗೆ ವಿಸ್ತರಿಸಬಹುದಾದ ಯುಎಚ್‌ಟಿ ಪ್ಲೆಕ್ಸಿ ಪ್ಯಾಕ್‌ ಘಟಕದಲ್ಲಿ 2018ರ ಡಿಸೆಂಬರ್‌ ರಿಂದ ನಂದಿನಿ ತೃಪ್ತಿ ಟೋನ್ಡ್ ಹಾಲು ಹಾಗೂ ನಂದಿನಿ ಹೆಲ್ತಿ ಲೈಫ್‌ ಡಬಲ್‌ ಟೋನ್ಡ್ ಹಾಲನ್ನು 500 ಎಂಎಲ್‌, 180 ಎಂಎಲ್‌ಗ‌ಳಲ್ಲಿ ಪ್ಯಾಕ್‌ ಮಾಡಿ ವಿತರಣೆ ಮಾಡಲಾಗುತ್ತಿದೆ. ಅವಶ್ಯಕತೆಗೆ ತಕ್ಕಂತೆ ಮುಂಬರುವ ದಿನಗಳಲ್ಲಿ 100 ಎಂಎಲ್‌ ಪ್ಯಾಕೇಟ್‌ ಮಾಡಿ ಮಾರಾಟ ಮಾಡಲು ಕ್ರಮವಹಿಸಲಾಗುವುದು. ಪ್ರಸ್ತುತ ಯು.ಹೆಚ್‌.ಟಿ. ಹಾಲನ್ನು ಒಕ್ಕೂಟದ ನಂದಿನಿ ಏಜೆಂಟರುಗಳ ಮುಖಾಂತರವಲ್ಲದೆ ಡಿಪೋಗಳು, ಸಗಟು ಮಾರಾಟಗಾರರು, ರಿಟೇಲ್‌ದಾರರು, ಹೊರ ರಾಜ್ಯದ ಆಂಧ್ರಪ್ರದೇಶದ ಡೈರಿ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌, ಜಮ್ಮ ಮತ್ತು ಕಾಶ್ಮೀರಕ್ಕೂ ಸಹ ಮಾರಾಟ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ಹಾಲು ಮಹಾ ಮಂಡಳಿಯಲ್ಲಿ ಸುಮಾರು 75ಕ್ಕೂ ಅಧಿ ಕ ವಿವಿಧ ರೀತಿಯ ಹಾಲಿನ ಉತ್ಪನ್ನಗಳನ್ನು ತಯಾರು ಮಾಡುತ್ತಿದ್ದು, ಅವುಗಳಲ್ಲಿ 30ಕ್ಕೂ ಹೆಚ್ಚಿನ ವಿವಿಧ ರೀತಿಯ ಸಿಹಿ ಉತ್ಪನ್ನಗಳು ಸೇರಿರುತ್ತವೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನಂದಿನಿ ತೃಪ್ತಿ ಹಾಗೂ ಹೆಲ್ತಿಲೈಫ್‌ ಹಾಲಿನ ವಿಶೇಷತೆಗಳು: ಐದು ಪದರುಗಳ ಪ್ಯಾಕೇಜ್‌ನಿಂದ ತಯಾರಿಸಲ್ಪಟ್ಟಿದೆ. ಪ್ಯಾಕೇಟ್‌ ತೆರೆಯುವವರೆಗೂ ಫ್ರಿಡ್ಜ್  ನಲ್ಲಿಡುವ ಅವಶ್ಯಕತೆ ಇರುವುದಿಲ್ಲ. 90 ದಿನಗಳ ದೀರ್ಘ‌ಕಾಲ ಬಾಳಿಕೆಯ ಹಾಲು, ಯಾವುದೇ ಪ್ರಿಸರ್ವೇಟೇಡ್‌ ಸೇರಿಸಿರುವುದಿಲ್ಲ, ಶೇ. 100 ಆರೋಗ್ಯ ಶೇ. 0ರಷ್ಟು ಬ್ಯಾಕ್ಟೀರಿಯಾ, ಸ್ಟೆರಿಲೈಜ್‌ ಮಾಡಿರುವುದರಿಂದ ಬಿಸಿ ಮಾಡದೆಯೂ ಸಹ ಕುಡಿಯಬಹುದು ಎಂದರು.

Advertisement

ರೈತರಿಗೆ 1 ಸಾವಿರ ರೂ. ಸಹಾಯಧನ: 2019ರ ಅ. 1ರಿಂದ ಪ್ರತಿ ಮೆಟ್ರಿಕ್‌ ಟನ್‌ ಪಶು ಆಹಾರಕ್ಕೆ 1 ಸಾವಿರ ರೂಗಳಂತೆ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಅನುದಾನ ನೀಡಲು ಕ್ರಮವಹಿಸಲಾಗಿದೆ ಎಂದ ಭೀಮಾನಾಯ್ಕ, ಒಕ್ಕೂಟದ ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಪ್ರತಿ ಟನ್‌ಗೆ ರೂ. 500 ಹಾಗೂ ಕಹಾಮ (ಡಿಡಿಎಫ್‌) ವತಿಯಿಂದ ಪ್ರತಿ ಟನ್‌ಗೆ ರೂ. 500ಗಳಂತೆ ಅನುದಾನ ನೀಡಲಾಗುತ್ತಿದೆ. ಹೀಗಾಗಿ ಪ್ರತಿ 50 ಕೆ.ಜಿ ಪಶು ಆಹಾರ ಬ್ಯಾಗ್‌ನ ದರದಲ್ಲಿ ರೂ. 50ರಂತೆ ರಿಯಾಯಿತಿ ನೀಡಲಾಗುತ್ತಿದೆ. ಇದರಿಂದಾಗಿ
ಈ ಭಾಗದ ಹಾಲು ಉತ್ಪಾದಕರಿಗೆ ಆರ್ಥಿಕವಾಗಿ ತುಂಬಾ ಅನುಕೂಲವಾಗಲಿದೆ ಎಂದರು.

ಒಕ್ಕೂಟವು ಗುಣಮಟ್ಟದ ಹಾಲು ಶೇಖರಣೆಯಲ್ಲಿ ಇಡಿ ರಾಜ್ಯದಲ್ಲಿಯೇ 5ನೇ ಸ್ಥಾನದಲ್ಲಿದ್ದು, ಎಸ್‌ಎನ್‌ಎಫ್‌ 8.5 ಮೇಲ್ಪಟ್ಟು ಶೇ. 95.5ರಷ್ಟು ಶೇಕಡವಾರು ಗುಣಮಟ್ಟದ ಹಾಲು ಶೇಖರಣೆ ಇರುತ್ತದೆ. 2019-20ನೇ ಸಾಲಿನ ಜನವರಿ/ಫೆಬ್ರವರಿ-2019ರ ಅಂತ್ಯಕ್ಕೆ ಒಕ್ಕೂಟದಲ್ಲಿ ದಿನಂಪ್ರತಿ 2.4 ಲಕ್ಷ ಲೀಟರ್‌ ಹಾಲು ಶೇಖರಣೆ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಒಕ್ಕೂಟಕ್ಕೆ 1.84 ಕೋಟಿ ರೂ. ನಿವ್ವಳ ಲಾಭ: 2019-20ನೇ ಸಾಲಿನ ಆಗಸ್ಟ್‌-2019ರ ಅಂತ್ಯಕ್ಕೆ ಒಕ್ಕೂಟವು ರೂ. 1,84,28,600 ನಿವ್ವಳ ಲಾಭ ಗಳಿಸಿದೆ. 2018-19ನೇ ಸಾಲಿನಲ್ಲಿ ಒಕ್ಕೂಟವು 36.55 ಲಕ್ಷ ರೂಗಳ ನಿವ್ವಳ ಲಾಭ
ಗಳಿಸಿದ್ದು, ಈ ಲಾಭದಲ್ಲಿ ಸಂಘಗಳಿಗೆ ಉತ್ತೇಜನ ಬೋನಸ್‌ ಮತ್ತು ಡಿವಿಡೆಂಡ್‌ ರೂಪದಲ್ಲಿ 21.56 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. 2019-20 ನೇ ಸಾಲಿಗೆ ಹಾಲು ಮಾರಾಟ ಪ್ರತಿದಿನ 128000.0 ಲೀ. ಮತ್ತು ಮೊಸರು 10500.0 ಕೆ.ಜಿ. ಮಾರಾಟದ ಗುರಿಯನ್ನು ಹಾಕಿಕೊಳ್ಳಲಾಗಿದೆ. ಈ ಗುರಿಯನ್ನು ಸಾಧಿ ಸಲು 60 ಹೊಸ ಡೀಲರುಗಳ ನೇಮಕಾತಿ, 20 ಎಟಿಎಂ/ಪಾರ್ಲರ್‌ಗಳು ಮತ್ತು 20 ಶಾಫಿಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಬಳಿಕ ಒಕ್ಕೂಟದ ಸಂಚಾರಿ ವಾಹನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರು, ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬುಕ್ಕಾ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next