Advertisement

ಹೆಚ್ಚುತ್ತಿವೆ ಆನ್‌ಲೈನ್‌ ವಂಚನೆ ಪ್ರಕರಣ

10:28 AM Jun 10, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಬಳಕೆಯೂ ಹೆಚ್ಚುತ್ತಿದ್ದು, ಆನ್‌ಲೈನ್‌ ವಂಚನೆ ಪ್ರಕರಣಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆನ್‌ಲೈನ್‌ ಬಳಸುತ್ತಿರುವ ಅನೇಕರು ತಮಗೆ ಅರಿವಿಲ್ಲದಂತೆಯೇ ಹಣಕಳೆದುಕೊಳ್ಳುತ್ತಿದ್ದು, ಲಕ್ಷಾಂತರ ರೂ. ಹಣ ವಂಚಕರ ಕೈ ಸೇರುತ್ತಿದೆ. ಇಷ್ಟೆಲ್ಲ ನಡೆದರೂ ಏನೂ ಮಾಡಲಾಗದ ಸ್ಥಿತಿ ಪೊಲೀಸರದ್ದಾಗಿದೆ.

Advertisement

ಆ್ಯಂಡ್ರಾಯ್ಡ ಮೊಬೈಲ್ ಬಂದಾಗಿನಿಂದ ಅಂತರ್ಜಾಲ ಬಳಕೆ ಹೆಚ್ಚುತ್ತಿದೆ. ಎಲೆಕ್ಟ್ರಾನಿಕ್‌ ವಸ್ತುಗಳಿಂದ ಹಿಡಿದು ಗೃಹಬಳಕೆ ವಸ್ತುಗಳು, ತಿನ್ನುವ ಆಹಾರವನ್ನೂ ಅಂತರ್ಜಾಲದಲ್ಲಿ ಬುಕ್‌ ಮಾಡಿ, ಮನೆಬಾಗಿಲಿಗೆ ತರಿಸಿಕೊಳ್ಳಲಾಗುತ್ತಿದೆ. ಇದರಿಂದ ಒಂದೆಡೆ ಅನುಕೂಲವಾಗಿದ್ದರೆ, ಮತ್ತೂಂದೆಡೆ ಮಾರಕವೂ ಆಗುತ್ತಿದೆ. ಆನ್‌ಲೈನ್‌ ವಂಚನೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 16 ಆನ್‌ಲೈನ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ದೂರದ ಜಾರ್ಖಂಡ್‌, ಒರಿಸ್ಸಾ, ಗುಜರಾತ್‌, ರಾಜಸ್ಥಾನ ಸೇರಿದಂತೆ ಉತ್ತರ ಭಾರತ ಭಾಗದ ಚಾಲಾಕಿ ಕಳ್ಳರು ಈ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಕಿಂಚಿತ್ತೂ ಸುಳಿವು ಸಿಗದ ರೀತಿಯಲ್ಲಿ ಹೈಟೆಕ್‌ ವಂಚನೆಯಲ್ಲಿ ತೊಡಗಿರುವ ಕಳ್ಳರು ಪೊಲೀಸರ ತಲೆಬಿಸಿಗೆ ಕಾರಣರಾಗುತ್ತಿದ್ದಾರೆ.

ಹೈಟೆಕ್‌ ಕಳ್ಳತನ ಹೀಗೆ?: ದೂರದ ರಾಜ್ಯಗಳಲ್ಲಿ ಕುಳಿತು ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ಸಿಮ್‌ ಖರೀದಿಸುವ ಈ ಹೈಟೆಕ್‌ ಕಳ್ಳರು, ಅದೇ ಹೆಸರಲ್ಲಿ ಬ್ಯಾಂಕ್‌ ಖಾತೆಯನ್ನು ಸಹ ತೆರೆಯುತ್ತಾರೆ. ಈ ಸಿಮ್‌ ಕಾರ್ಡ್‌ಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ ಡೇಟಾದಲ್ಲಿನ ಮೊಬೈಲ್ ಸಂಖ್ಯೆಗಳನ್ನು ಪಡೆದು, ಅವರಿಗೆ ಮೊಬೈಲ್ ಕರೆ ಮಾಡುತ್ತಾರೆ. ಹೀಗೆ ಕರೆಮಾಡುವ ಕಳ್ಳರು, ನಾವು ಬ್ಯಾಂಕ್‌ನವರು, ನಿಮ್ಮ ಎಟಿಎಂ ಕಾರ್ಡ್‌ ಅವಧಿ ಮುಗಿದಿದ್ದು, ಲಾಕ್‌ ಆಗುವ ಸಂಭವವಿದೆ. ತಕ್ಷಣ ಅದನ್ನು ರಿನಿವಲ್ ಮಾಡಬೇಕು. ಇಲ್ಲದಿದ್ದಲ್ಲಿ ಕಾರ್ಡ್‌ ಬಳಕೆ ಮತ್ತು ಖಾತೆಯ ಹಣ ಲಾಕ್‌ ಆಗುತ್ತದೆ ಎಂದು ಸುಳ್ಳು ಹೇಳುತ್ತಾರೆ. ಇದರಿಂದ ಆತಂಕಕ್ಕೊಳಗಾಗುವ ಅಮಾಯಕರು, ವಂಚಕರು ಕೇಳುವ ಎಟಿಎಂ ಪಿನ್‌ ಸಂಖ್ಯೆ, ಇತರೆ ಗೌಪ್ಯ ಮಾಹಿತಿಯನ್ನೆಲ್ಲ ಫೋನಿನಲ್ಲೇ ನೀಡುತ್ತಾರೆ. ಬಳಿಕ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಖಾತೆಯಲ್ಲಿರುವ ಹಣವನ್ನು ವಸ್ತುಗಳ ಖರೀದಿ ಹೆಸರಲ್ಲಿ ತಮಗೆ ಬೇಕಾದ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಕೂಡಲೇ ತಮ್ಮ ಮೊಬೈಲ್ಗೆ ಸಂದೇಶ ಬಂದಾಗ ಅಮಾಯಕರು ತಾವು ಮೋಸ ಹೋಗಿದ್ದೇವೆ ಎಂದು ತಿಳಿದು ಪೊಲೀಸರ ಮೊರೆ ಹೋಗುತ್ತಾರೆ. ಅಷ್ಟೊತ್ತಿಗೆ ಆಗಲೇ ಹಣ ಕಂಡವರ ಪಾಲಾಗುವುದರ ಜತೆಗೆ ಕರೆ ಸಿಮ್‌ ಸಹ ನಾಟ್ ರೀಚಬಲ್ ಆಗಿರುತ್ತದೆ. ಇನ್ನು ಬ್ಯಾಂಕ್‌ ಖಾತೆ ಹೆಸರಲ್ಲಾದರೂ ಹೈಟೆಕ್‌ ವಂಚಕರನ್ನು ಪತ್ತೆಹಚ್ಚಲು ಬಲೆ ಬೀಸುವ ಪೊಲೀಸರಿಗೆ ಅದು ನಿರಾಶ್ರಿತರೊ, ವಯೋವೃದ್ಧರೋ, ರೋಗಿಗಳಧ್ದೋ ವಿಳಾಸ ಆಗಿರುತ್ತದೆ. ವಂಚಕರು ಮೊದಲೇ ಪ್ಲಾನ್‌ ಮಾಡಿ ಅಮಾಯಕರ ಹೆಸರಲ್ಲಿ ವ್ಯವಸ್ಥಿತವಾಗಿ ಆನ್‌ಲೈನ್‌ ಮೂಲಕ ಹಣವನ್ನು ದೋಚುತ್ತಿದ್ದಾರೆ.

ಸೈನಿಕರ ಹೆಸರಲ್ಲಿ!: ಇನ್ನೂ ಕೆಲವರು ಸೈನಿಕರ ವಾಹನದ ಹೆಸರಲ್ಲಿ ಆನ್‌ಲೈನ್‌ ವಂಚನೆ ಶುರುಮಾಡಿದ್ದಾರೆ. ಕಾರ್‌, ಬೈಕ್‌ ಮಾರಾಟ ಮಾಡುವ ಜಾಲತಾಣಗಳಲ್ಲಿ ಸೈನಿಕರ ಫೋಟೋ ಜೊತೆಗೆ ಅವರ ವಾಹನ ಎಂದು ಪೋಸ್ಟ್‌ ಹಾಕಿ, ಅದಕ್ಕೊಂದು ಬೆಲೆ ಕೋಟ್ ಮಾಡ್ತಾರೆ. ನಾನು ಸೈನಿಕ ನನ್ನ ವಾಹನ ಏರ್‌ಪೋರ್ಟ್‌ನಲ್ಲಿದೆ. ನಾನಿದನ್ನು ಅರ್ಧ ಬೆಲೆಗೆ ಮಾರುತ್ತೇನೆ ಎಂದು ಪೋಸ್ಟ್‌ ಹಾಕ್ತಾರೆ. ಇದನ್ನು ನಂಬಿ ಕರೆ ಮಾಡುವ ಅಮಾಯಕ ಜನರಿಂದ ಕಸ್ಟಂ ಡ್ಯೂಟಿ, ರಿಜಿಸ್ಟ್ರೇಷನ್‌, ಕೋರಿಯರ್‌, ಪಾರ್ಸಲ್ ಸರ್ವಿಸ್‌ ಹೀಗೆ ತರಹೇವಾರಿ ಕಾರಣ ಹೇಳಿ ಹಣ ಕೀಳುತ್ತಾರೆ. ವಾಹನ ಖರೀದಿದಾರರು ವಂಚಕರು ಹೇಳಿದಂತೆ ಕೇಳಿ ಆನ್‌ಲೈನ್‌ನಲ್ಲಿ ಹಣ ನೀಡುತ್ತಾ ಹೋಗುತ್ತಾರೆ. ಕೊನೆಗೆ ತಾವು ಮೋಸ ಹೋಗುತ್ತಿದ್ದೇವೆ ಎಂಬುದು ಅರಿವಾಗಿ ವಂಚಕರಿಗೆ ಜೋರು ಮಾಡಿದರೆ ಅಲ್ಲಿಂದ ವಂಚಕರ ಫೋನ್‌ ನಾಟ್ ರೀಚಬಲ್. ಇತ್ತ ಹಣ ಕಳೆದುಕೊಂಡ ಅಮಾಯಕರು ಪೊಲೀಸರ ಮುಂದೆ ಹಾಜರ್‌. ದೂರು ದಾಖಲಿಸಿಕೊಳ್ಳುವ ಸೈಬರ್‌ ಪೊಲೀಸರಿಗೆ ಖಾತೆ, ದೂರವಾಣಿ ಎಲ್ಲವೂ ನಕಲಿ ಎಂದು ತಿಳಿಯುತ್ತದೆ.

ಮದುವೆ ಹೆಸರಲ್ಲಿ ವಂಚನೆ: ಮ್ಯಾಟ್ರಿಮೊನಿ ಸೈಟ್‌ಗಳ ಮೂಲಕ ಸಹ ವಂಚಿಸುವ ಕಾರ್ಯ ಇದೀಗ ಆರಂಭವಾಗಿದೆ. ವಂಚಕರು ಸುಂದರವಾದ ಹುಡುಗರ ಫೋಟೊ, ಸುಳ್ಳು ಮಾಹಿತಿಯೊಂದಿಗೆ ಮ್ಯಾಟ್ರಿಮೊನಿ ಸೈಟ್‌ನಲ್ಲಿ ಕಾಣಿಸಿಕೊಳ್ಳುವ ಹುಡುಗರು-ಹುಡುಗಿಯರನ್ನು ಬಲೆಗೆ ಕೆಡವಿಕೊಳ್ಳುತ್ತಾರೆ. ಕೆಲ ದಿನ, ವಾರ, ತಿಂಗಳು ಚಾಟಿಂಗ್‌, ಡೇಟಿಂಗ್‌, ಮೀಟಿಂಗ್‌ ಮಾಡ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಸಹ ಆಗಲಿದೆ ಎನ್ನುವ ಮಟ್ಟಕ್ಕೆ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಈ ಹಂತದಲ್ಲಿ ಗಿಫ್ಟ್‌ ಹೆಸರಲ್ಲಿ ವಂಚನೆಗಳು ನಡೆಯುತ್ತಿವೆ.

Advertisement

ಹುಡುಗಿಗೆ ತುಂಬಾ ಬೆಲೆ ಬಾಳುವ ಅಂದರೆ ಲಕ್ಷಾಂತರ ರೂ. ಬೆಲೆ ಬಾಳುವ ಗಿಫ್ಟ್‌ ಕಳುಹಿಸಿದ್ದಾಗಿ ಫೋನ್‌ ಮಾಡಿ, ಫೋನ್‌ ಕಟ್ ಮಾಡುತ್ತಾರೆ. ಅದಾದ ನಂತರ ಫೋನ್‌ ಸ್ವಿಚ್ ಆಫ್‌ ಮಾಡುತ್ತಾರೆ. ಇತ್ತ ಇನ್ನೊಂದು ಕಡೆಯಿಂದ ಇನ್ನೊಬ್ಬ ವಂಚಕ ಫೋನ್‌ ಮಾಡಿ, ನಿಮಗೆ ಭಾರೀ ಬೆಲೆ ಬಾಳುವ ಉಡುಗೊರೆ ಬಂದಿದೆ. ಇದಕ್ಕಾಗಿ ನೀವು ಕಸ್ಟಂ, ಪಾರ್ಸಲ್ ಶುಲ್ಕ ಕಟ್ಟಬೇಕೆಂದು ತಿಳಿಸುತ್ತಾರೆ. ಮದುವೆ ಆಗುವ ಹುಡುಗ ಕಳುಹಿಸಿದ ಉಡುಗೊರೆ ಎಂದು ಹುಡುಗಿ, ಹುಡುಗಿ ಕಡೆಯವರು ಕೇಳಿದಷ್ಟು ದುಡ್ಡು ಕೊಡುತ್ತಾರೆ. ಆದರೆ, ಗಿಫ್ಟ್‌ ಬರೋದೇ ಇಲ್ಲ. ಹಣ ಪಡೆಯುವವರೆಗೆ ಆನ್‌ನಲ್ಲಿರುವ ´ೋನ್‌ ಹಣ ಸಿಕ್ಕ ನಂತರ ಅದೂ ಸಹ ಸ್ವಿಚ್ ಆಫ್‌ ಆಗುತ್ತದೆ. ಇನ್ನು ಎಟಿಎಂ ಕೇಂದ್ರಗಳಲ್ಲಿ ಸಹಾಯ ಮಾಡುವ ನೆಪದಲ್ಲಿ ಕಾರ್ಡ್‌ ಬದಲಾಯಿಸಿ, ಹಣ ಪಡೆದು ವಂಚಿಸುವ ಕಳ್ಳತನಗಳು ದಿನೇದಿನೇ ಹೆಚ್ಚುತ್ತಿವೆ. ಹಳ್ಳಿಜನ, ವಯಸ್ಸಾದವರನ್ನೇ ಗುರಿಯಾಗಿಸಿಕೊಳ್ಳುವ ಎಟಿಎಂ ಕಳ್ಳರು, ಇಂತಹ ವಂಚನೆಗೆ ಮುಂದಾಗುತ್ತಿದ್ದು, ನಕಲು ಕಾರ್ಡ್‌ ಸಿದ್ಧಪಡಿಸಿ ಕಳ್ಳತನ ಪ್ರಕರಣಗಳು ಸಹ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ವರದಿಯಾಗಿದೆ.

ಜನ ಮಾಹಿತಿ ನೀಡಬೇಡಿ: ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಪೊಲೀಸ್‌ ಇಲಾಖೆ ಸಾರ್ವಜನಿಕರಿಗೆ ಕೆಲ ಸೂಚನೆ ನೀಡಿದೆ. ಯಾರೇ ನಿಮಗೆ ಫೋನ್‌ ಮಾಡಿ ಎಟಿಎಂ ಪಿನ್‌, ಸೀರಿಯಲ್ ನಂ., ಅವಧಿ ಮುಂತಾದ ವಿವರ ಕೇಳಿದರೆ ಕೊಡಬೇಡಿ. ಯಾವುದೇ ಬ್ಯಾಂಕ್‌ನವರು ಈ ರೀತಿ ಕರೆ ಮಾಡುವುದಿಲ್ಲ. ಇದಲ್ಲದೆ ಆನ್‌ಲೈನ್‌ನಲ್ಲಿ ವಸ್ತು ಖರೀದಿಸುವಾಗ ಎಚ್ಚರ ವಹಿಸಿ. ಸುಖಾ ಸುಮ್ಮನೆ ಹಣ ವರ್ಗಾವಣೆ ಮಾಡಬೇಡಿ. ಅನುಮಾನ ಬಂದ ತಕ್ಷಣ ಪೊಲೀಸರಿಗೆ ತಿಳಿಸಿ ಎಂದು ಕೋರಿದೆ.

95 ಲಕ್ಷ ರೂ. ವಂಚನೆ
2018ರ ವರ್ಷಾಂತ್ಯದಿಂದ ಈವರೆಗೆ ಜಿಲ್ಲೆಯಲ್ಲಿ ದಾಖಲಾಗಿರುವ 20 ಪ್ರಕರಣಗಳಲ್ಲಿ ಒಟ್ಟಾರೆ 95 ಲಕ್ಷ 51 ಸಾವಿರ 3750 ರೂ. ವಂಚನೆ ಆಗಿದೆ. ಇದರಲ್ಲಿ ಎಲ್ಲಾ ಡಿಟಿಎಚ್, ಮೊಬೈಲ್ಗೆ ರಿಚಾರ್ಜ್‌ ಮಾಡುವ ಈಸಿ ಕರೆನ್ಸಿ ನೀಡುವ ನೆಪದಲ್ಲಿ ವಂಚಿಸಿರುವ 56 ಲಕ್ಷ ರೂ., ಜಿಯೋ ಟವರ್‌ ಹೆಸರಲ್ಲಿ, ಶಾಪ್‌ 18ನಲ್ಲಿ ಕಾರ್‌ ಗಿಫ್ಟ್‌ ಬಂದಿದೆ ಎಂದು ಸುಳ್ಳು ಹೇಳಿ ಹಣ ವಸೂಲಿ ಮಾಡಿದ, ಎಟಿಎಂನಲ್ಲಿ ಹಣ ಕದ್ದದ್ದು ಸೇರಿದಂತೆ ವಿವಿಧ ಪ್ರಕರಣಗಳು ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next