ಬಳ್ಳಾರಿ: ಹೈದ್ರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಹತ್ಯೆ ಖಂಡಿಸಿ ಎನ್‌ಎಸ್‌ಯುಐ ವಿದ್ಯಾರ್ಥಿ ಕಾಂಗ್ರೆಸ್ ಸಂಘಟನೆ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿನಿಯರು ನಗರದಲ್ಲಿ ಬುಧುವಾರ ಬೃಹತ್ ಪ್ರತಿಭಟನೆ ನಡೆಸಿದರು.
ವಿವಿಧ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಪ್ರತಿಭಟನಾ ಮೆರವಣಿಗೆ ನಾರಾಯಣರಾವ್ ಉದ್ಯಾನವನದಿಂದ ಗಡಗಿ ಚನ್ನಪ್ಪ ವೃತ್ತದ ಮೂಲಕ ಡಿಸಿ ಕಚೇರಿ ತಲುಪಿತು. ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಅಪರಾಧಿ ಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸಾಥ್ ನೀಡಿ ಹತ್ಯೆ ಪ್ರಕರಣ ಖಂಡಿಸಿದರು. ಬಳಿಕ ಮಾತನಾಡಿದ ಅವರು, ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡಿ ಸಮಾಜ ತಲೆತಗ್ಗಿಸುವ ಘಟನೆಯಾಗಿದೆ.
ಇದೊಂದು ಅಮಾನವೀಯ ಕೃತ್ಯವಾಗಿದ್ದು ಕೂಡಲೇ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಪ್ರಿಯಾಂಕಾ ಬಾವಿ ಮಾತನಾಡಿ, ದೇಶದಲ್ಲಿ ದಿನದಿಂದ ದಿನಕ್ಕೆ ಮಹಿಳೆ, ಬಾಲಕಿಯರ ಮೇಲೆ ಹಲ್ಲೆ, ಅತ್ಯಾಚಾರ ಪ್ರಕರಣಗಳು ಹೆಚ್ಚಿನ ಮಟ್ಟದಲ್ಲಿ ವರದಿಯಾಗುತ್ತಿದ್ದರೂ ಆಳುವ ಸರ್ಕಾರಗಳು ಸರಿಯಾದ ಕ್ರಮ ಜರುಗಿಸುತ್ತಿಲ್ಲ. ಹೀಗಾದರೆ ಮಹಿಳೆ, ಬಾಲಕಿಯರಿಗೆ ರಕ್ಷಣೆ ಯಾವಾಗ ಎಂಬ ಪ್ರಶ್ನೆ ಎದ್ದಿದೆ? ಅತ್ಯಾಚಾರ ಮಾಡುವಾಗ, ಹೆಣ್ಣನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವಾಗ ನಿಮ್ಮ ಮನೆಯಲ್ಲಿನ ತಾಯಿ, ತಂಗಿ ನೆನಪಾಗುವುದಿಲ್ಲವೇ? ಹೆಣ್ಣು ಭೋಗದ ವಸ್ತುವಲ್ಲ ಎಂಬುದನ್ನು ಮರೆಯಬೇಡಿ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ನೀವು ಹೀಗೆ ಕೆಟ್ಟ ದೃಷ್ಟಿಯಿಂದ ನೋಡುತ್ತೀರಾ? ಎಂದು ತೀವ್ರ ಬೇಸರ ವ್ಯಕ್ತಪಡಿಸಿದಳು.
ಕೆಪಿಸಿಸಿ ವಕ್ತಾರೆ ಕವಿತಾರೆಡ್ಡಿ, ಜನರಲ್ಲಿ ಹೆಚ್ಚಿನ ಮಟ್ಟದ ಜಾಗೃತಿ ಮೂಡಬೇಕಿದೆ. ಮಹಿಳೆಗೆ ಅನ್ಯಾಯವಾದಾಗ ರಕ್ಷಣೆಗಾಗಿ ಪೊಲೀಸ್ ಸ್ಟೇಷನ್‌ಗೆ ಹೋದರೂ ಸರಿಯಾದ ರಕ್ಷಣೆ ದೊರೆಯುತ್ತಿಲ್ಲ ಎಂಬ ದೂರುಗಳಿವೆ. ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡುವುದು ಬಿಟ್ಟು ಅತ್ಯಂತ ಕನಿಷ್ಠವಾಗಿ ನಡೆಸಿಕೊಳ್ಳುವ ಸಂಪ್ರದಾಯ ಸಹ ದೇಶದಲ್ಲಿ ಸೃಷ್ಟಿಯಾಗಿರುವುದು ದುರಂತದ ಸಂಗತಿ. ಪೊಲೀಸರು ಇನ್ನಾದರೂ ಮಾನವೀಯತೆಯಿಂದ ವರ್ತಿಸಬೇಕು. ಜತೆಗೆ ಕಾನೂನುಗಳು ಬದಲಾಗಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಸಿದ್ದು ಹಳ್ಳೆಗೌಡ, ಬಿ. ಕೃಷ್ಣಾ, ಜಗದೀಶ್, ವಿವೇಕ್, ಧರ್ಮಾ, ಮಹೇಶ್, ಅಂಬರೇಶ್ ಸೇರಿದಂತೆ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿನಿಯರು ಇದ್ದರು.