Advertisement

ಇವಿಎಂ ಯಂತ್ರಗಳ ಮೇಲೂ ಅನುಮಾನ

05:18 PM Apr 14, 2019 | Team Udayavani |

ಬಳ್ಳಾರಿ: ದೇಶದಲ್ಲಿ ಐದು ವರ್ಷಕ್ಕೊಮ್ಮೆ ನಡೆಯುತ್ತಿರುವ ಚುನಾವಣೆಗಳು ನಾಟಕದಂತಾಗಿವೆ. ನ್ಯಾಯಬದ್ಧವಾಗಿ ನಡೆಯುತ್ತಿದ್ದ ಚುನಾವಣೆಗಳು ಮರೆಯಾದ ಹಿನ್ನೆಲೆಯಲ್ಲಿ ಇವಿಎಂಯಂತ್ರಗಳು ಬಂದ ನಂತರವೂ ಚುನಾವಣೆಗಳ ಬಗ್ಗೆ ಅನುಮಾನ ಪಡುವಂತಾಗಿದೆ ಎಂದು ಎಸ್‌ ಯುಸಿಐಸಿ ಪಕ್ಷದ ರಾಜ್ಯ ಕಾರ್ಯದರ್ಶಿ ಸದಸ್ಯ ಕೆ.ಸೋಮಶೇಖರ್‌ ಆರೋಪಿಸಿದರು.

Advertisement

ನಗರದ ಗಾಂಧಿಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶನಿವಾರ ಏರ್ಪಡಿಸಿದ್ದ ಸಾರ್ವಜನಿಕ ಬಹಿರಂಗ
ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆಗೆ ಮೊದಲನೆಯ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶ, ಉತ್ತರ ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಇವಿಎಂ ಯಂತ್ರಗಳು ಕೈಕೊಟ್ಟಿವೆ.
ಯಾವುದೇ ಪಕ್ಷದ ಗುಂಡಿ ಒತ್ತಿದರೂ ಬಿಜೆಪಿಗೆ ಮತ ಬೀಳುವ ವಿದ್ಯಮಾನ ನಡೆದಿದೆ ಎಂಬ ವಿಷಯ ಜನರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮತ್ತೂಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಚುನಾವಣೆ
ಆಯೋಗಕ್ಕೆ ಕಿಮ್ಮತ್ತು ನೀಡದೆ ಹೋದಲ್ಲೆಲ್ಲ ರಾಜಕೀಯ ಭಾಷಣದಲ್ಲಿ ಸೇನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಏನು ಮಾಡುತ್ತಿದೆ.? ಸೇನೆಯನ್ನು ರಾಜಕೀಯಕ್ಕೆ
ಬಳಸುವುದನ್ನು ವಿರೋಧಿಸಿ ಅನೇಕ ನಿವೃತ್ತ ಸೇನಾ ಅಧಿಕಾರಿಗಳು ರಾಷ್ಟ್ರಪತಿಗಳಿಗೆ ಪತ್ರ ಸಹ ಬರೆದಿದ್ದಾರೆ ಎಂದು ತಿಳಿಸಿದರು.

ನೀಡಿರುವ ಭರವಸೆಗಳ ಬಗ್ಗೆ ಚಕಾರವೆತ್ತದ ಪ್ರಧಾನಿ ನರೇಂದ್ರ ಮೋದಿಗೆ ತನ್ನ ಸಾಧನೆಗಳ ಬಲದ ಮೇಲೆ ಮತ ಕೇಳುವ ನೈತಿಕತೆಯಿಲ್ಲ. ಕಾಂಗ್ರೆಸ್‌ ಜನವಿರೋಧಿ ನೀತಿಗಳನ್ನೇ ಬಿಜೆಪಿ
ಮುಂದುವರಿಸುತ್ತಿದೆ. ಈ ಎರಡು ಪಕ್ಷಗಳು ಜನರಿಗೆ ದ್ರೋಹವೆಸಗಿವೆ. ಹಾಗಾಗಿ ಈ ಎರಡು ಪಕ್ಷಗಳನ್ನು ತಿರಸ್ಕರಿಸಿ, ಜನರ ಧ್ವನಿಯನ್ನು ಎತ್ತಿಹಿಡಿಯುತ್ತಿರುವ ಹೋರಾಟ ಬೆಳೆಸುತ್ತಿರುವ ಎಸ್‌ಯುಸಿಐಸಿ ಪಕ್ಷಕ್ಕೆ ಮತ ಹಾಕುವ ಮೂಲಕ ಎ.ದೇವದಾಸ್‌ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಎಸ್‌ಯುಸಿಐಸಿ ಅಭ್ಯರ್ಥಿ ಎ.ದೇವದಾಸ್‌ ಮಾತನಾಡಿ, ದುಡಿಯುವ ಜನರಾದ ನಾವು ನಮ್ಮದೇ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಬಂಡವಾಳಶಾಹಿಗಳು ತಮ್ಮ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳನ್ನು ಹಣ, ಮಾಧ್ಯಮ ಬಲದ ಮೂಲಕ ಮುನ್ನಲೆಗೆ ತಂದು, ಜನರಲ್ಲಿ ಈ ಪಕ್ಷಗಳ ಬಗ್ಗೆ ಇಲ್ಲದ ಭ್ರಮೆಯನ್ನು ಸೃಷ್ಟಿ ಮಾಡುತ್ತಿವೆ. ಈ ಸತ್ಯವನ್ನು ನಾವು ಅರಿಯಬೇಕು. ಈ ವ್ಯವಸ್ಥೆಯಲ್ಲಿ ಯಾರೇ ಅಧಿಕಾರಕ್ಕೇರಿದರೂ, ಬಂಡವಾಳಶಾಹಿಗಳ ಉದ್ಧಾರವೇ ಖಚಿತ. ಹಾಗಾಗಿ ಕಾರ್ಮಿಕ
ವರ್ಗ ಹೋರಾಟ ಕಟ್ಟುತ್ತಾ ಈ ವ್ಯವಸ್ಥೆಯನ್ನೇ ಕಿತ್ತೂಗೆಯಬೇಕು. ಆ ಮೂಲಕ ಜನರ ಎಲ್ಲಾ ಸಮಸ್ಯೆಗಳಿಗೆ ಕೊನೆ ಹಾಡಬೇಕು. ಆದ್ದರಿಂದ ಎಸ್‌ಯುಸಿಐಸಿ ಪಕ್ಷದ ಟ್ರ್ಯಾಕ್ಟರ್‌ ಗುರುತಿಗೆ ಮತ
ಹಾಕುವಂತೆ’ ಮನವಿ ಮಾಡಿದರು.

ಇದಕ್ಕೂ ಮುನ್ನ 1919ರ ಏ.13 ರಂದು ನಡೆದಿದ್ದ ಜಲಿಯನ್‌ ವಾಲಾಬಾಗ್‌ ಘಟನೆಯು ಶನಿವಾರಕ್ಕೆ 100 ವರ್ಷ ಪೂರೈಸಿದ
ಹಿನ್ನೆಲೆಯಲ್ಲಿ ಹತ್ಯಾಕಾಂಡದ ಹುತಾತ್ಮರಿಗೆ ನಮನ ಸಲ್ಲಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣಾ ಉಪಾಧ್ಯ, ಜಿಲ್ಲಾ ಸಮಿತಿ ಸದಸ್ಯೆ ಎಂ.ಎನ್‌.ಮಂಜುಳಾ ಮಾತನಾಡಿದರು. ಸದಸ್ಯೆ ಡಿ.ನಾಗಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಶಾಂತಾ, ಡಾ| ಪ್ರಮೋದ್‌, ಗೋವಿಂದ್‌, ಸುರೇಶ್‌ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next