Advertisement

ದಿಲ್ಲಿ ಗದ್ದುಗೆ ಸೋತು ಗಲ್ಲಿಯಲ್ಲಿ ಗೆದ್ದ ಕಾಂಗ್ರೆಸ್

11:35 AM Jun 01, 2019 | |

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯುತ್ಸಾಹದಿಂದ ಗೆಲುವಿನ ನಗೆ ಬೀರಿತ್ತು. ಆದರೆ ಈ ಗೆಲುವು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲಿ ಮುಂದುವರಿಯಲಿಲ್ಲ. 1 ಪಪಂ, 3 ಪುರಸಭೆಯಲ್ಲಿ ಕಾಂಗ್ರೆಸ್‌ ಗೆದ್ದು ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ಸು ಸಾಧಿಸಿದೆ. ಎಂಪಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ ಲೋಕಲ್‌ ಫೈಟ್‌ನಲ್ಲಿ ಕೈ ಹಿಡಿದಿದ್ದಾರೆ.

Advertisement

ಬಳ್ಳಾರಿ: ಲೋಕಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ ಪಕ್ಷ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ‘ದಿಲ್ಲಿ ಗದ್ದುಗೆ ಸೋತ ನೋವಿನಿಂದ ಹೊರಬರುವ ಯತ್ನ ಮಾಡಿದೆ.

ಬಳ್ಳಾರಿ ಜಿಲ್ಲೆಯಲ್ಲಿ 9 ವಿಧಾನಸಭಾ ಕ್ಷೇತ್ರಗಳಿದ್ದು, ಇದರಲ್ಲಿ 6 ಜನ ಶಾಸಕರು ಕಾಂಗ್ರೆಸ್‌ ಪಕ್ಷದವರೇ ಇದ್ದಾರೆ. ಇಬ್ಬರು ವಿಧಾನ ಪರಿಷತ್‌ ಸದಸ್ಯರು, ಒಬ್ಬ ರಾಜ್ಯಸಭೆ ಸದಸ್ಯರು ಇದ್ದರೂ, ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸೋಲು ಕಂಡಿತ್ತು. ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲೇ ಪಕ್ಷದ ಅಭ್ಯರ್ಥಿಗೆ ಅತ್ಯಂತ ಕಡಿಮೆ ಮತಗಳು ಲಭಿಸಿದ್ದು, ಭಾರಿ ಮುಖಭಂಗವಾಗಿದ್ದು, ನುಂಗಲಾರದ ಬಿಸಿ ತುಪ್ಪದಂತಾಗಿತ್ತು. ಆದರೆ, ಶುಕ್ರವಾರ ಹೊರಬಿದ್ದ ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಭರ್ಜರಿ ಗೆಲುವು ಲಭಿಸಿದೆ. ಹರಪನಹಳ್ಳಿ, ಹಡಗಲಿ, ಸಂಡೂರು ಪುರಸಭೆ, ಕಮಲಾಪುರ ಪಟ್ಟಣ ಪಂಚಾಯಿತಿಗಳ ಒಟ್ಟು 93 ವಾರ್ಡ್‌ಗಳಲ್ಲಿ 54 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಪಕ್ಷ ಜಯಗಳಿಸಿದೆ. ಇನ್ನುಳಿದ ವಾರ್ಡ್‌ಗಳಲ್ಲಿ ಬಿಜೆಪಿ 30, ಜೆಡಿಎಸ್‌ 1, ಪಕ್ಷೇತರ ಅಭ್ಯರ್ಥಿಗಳು 8 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಸ್ಥಳೀಯ ಸಂಸ್ಥೆಯಲ್ಲೂ ಬಹುಮತ ಲಭಿಸಿದ್ದು, ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಸ್ಥಳೀಯ ಸಂಸ್ಥೆಗಳ ಗೆಲುವು ಕಾಂಗ್ರೆಸ್‌ ಪಕ್ಷಕ್ಕೆ ಮರುಭೂಮಿಯಲ್ಲಿ ಓಯಸಿಸ್‌ ಲಭಿಸಿದಂತಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ: ಜಿಲ್ಲೆಯ ನಾಲ್ಕು ಸ್ಥಳೀಯ ಸಂಸ್ಥೆಗಳಾದ ಹರಪನಹಳ್ಳಿ, ಹಡಗಲಿ, ಸಂಡೂರು ಪುರಸಭೆ ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಗೆ ಕಳೆದ ಮೇ 29 ರಂದು ಮತದಾನ ಪ್ರಕ್ರಿಯೆ ನಡೆದಿದ್ದು, ಮೇ 31ರಂದು ಶುಕ್ರವಾರ ಫಲಿತಾಂಶ ಹೊರಬಿತ್ತು. ಹೊಸಪೇಟೆ ತಾಲೂಕು ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ 20 ವಾರ್ಡ್‌ಗಳ ಪೈಕಿ ಕಾಂಗ್ರೆಸ್‌ 14, ಪಕ್ಷೇತರ 5, ಬಿಜೆಪಿ 1 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಅದೇ ರೀತಿ ಹರಪನಹಳ್ಳಿ ಪುರಸಭೆಯ 27 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 14, ಬಿಜೆಪಿ 10, ಜೆಡಿಎಸ್‌ 1, ಪಕ್ಷೇತರ 2, ಹೂವಿನಹಡಗಲಿ ಪುರಸಭೆಯ 23 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 14, ಬಿಜೆಪಿ 9, ಸಂಡೂರು ಪುರಸಭೆಯ 23 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ 12, ಬಿಜೆಪಿ 10, ಪಕ್ಷೇತರ 1 ವಾರ್ಡ್‌ನಲ್ಲಿ ಜಯ ಗಳಿಸಿದೆ. ಕಮಲಾಪುರ ಪಪಂ, ಹಡಗಲಿ ಪುರಸಭೆಯಲ್ಲಿ ಭಾರಿ ಬಹುಮತ ಲಭಿಸಿರುವ ಕಾಂಗ್ರೆಸ್‌ ಪಕ್ಷಕ್ಕೆ ಸಂಡೂರು, ಹರಪನಹಳ್ಳಿ ಪುರಸಭೆಯಲ್ಲಿ ಸರಳ ಬಹುಮತ ಲಭಿಸಿದೆ.

ಮರುಕಳಿಸಿದ ಹಿಂದಿನ ಫಲಿತಾಂಶ: ಈ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ 2013 ರಲ್ಲಿ ನಡೆದ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್‌ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿತ್ತು. ಹಡಗಲಿ ಪುರಸಭೆಯ 23 ಸ್ಥಾನಗಳ ಪೈಕಿ ಕಾಂಗ್ರೆಸ್‌ 14, ಜೆಡಿಎಸ್‌ 2 ಬಿಜೆಪಿ 1, ಬಿಎಸ್‌ಆರ್‌ 4 ಮತ್ತು ಪಕ್ಷೇತರರು ಇಬ್ಬರು ಆಯ್ಕೆಯಾಗಿದ್ದರು.

Advertisement

ಸಂಡೂರು ಪುರಸಭೆಯಲ್ಲಿ ಕಾಂಗ್ರೆಸ್‌ 14 ಮತ್ತು ಬಿಎಸ್‌ಆರ್‌ 9 ಸ್ಥಾನಗಳನ್ನು ಪಡೆದಿತ್ತು. ಕಮಲಾಪುರ ಪಟ್ಟಣ ಪಂಚಾಯ್ತಿಯಲ್ಲಿ ಕಾಂಗ್ರೆಸ್‌ 11, ಬಿಜೆಪಿ 1, ಬಿಎಸ್‌ಆರ್‌ 3, ಪಕ್ಷೇತರರು 5 ಜನ ಸದಸ್ಯರು ಆಯ್ಕೆಯಾಗಿದ್ದು, 2019ರ ಚುನಾವಣೆಯಲ್ಲೂ ಈ ಸ್ಥಳೀಯ ಸಂಸ್ಥೆಗಳಲ್ಲಿ ಫಲಿತಾಂಶ ಮರುಕಳಿಸಿದಂತಾಗಿದೆ.

‘ಕೈ’ಗೆ ಬೆಂಬಲ-ಕುತೂಹಲ: ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಹಕ್ಕು ಚಲಾಯಿಸಿರುವ ಜಿಲ್ಲೆಯ ಮತದಾರರು ನಾಲ್ಕು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷ ತಳಮಟ್ಟದಲ್ಲಿ ಭದ್ರವಾಗಿದೆ. ಪರಿಣಾಮ ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ 6 ಕ್ಷೇತ್ರಗಳಲ್ಲಿ ಜಯಗಳಿಸಿದರೆ, ಬಿಜೆಪಿ 3 ಕ್ಷೇತ್ರದಲ್ಲಿ ಜಯಗಳಿಸಿದೆ. ಇದೀಗ ಹಡಗಲಿ, ಹರಪನಹಳ್ಳಿ, ಸಂಡೂರು ಪುರಸಭೆ, ಕಮಲಾಪುರ ಪಪಂ ಮೇಲೂ ಕಾಂಗ್ರೆಸ್‌ ಪಕ್ಷ ತನ್ನ ಬಾವುಟ ಹಾರಿಸಿದೆ. ಲೋಕಸಭೆ ಉಪಚುನಾವಣೆಯಲ್ಲೂ 2.43 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದ ಕಾಂಗ್ರೆಸ್‌ ಪಕ್ಷ ಸಾರ್ವತ್ರಿಕ ಚುನಾವಣೆಯಲ್ಲೇ ಸೋತಿದ್ದು ಯಾಕೆ ಎಂಬುದಕ್ಕೆ ಕಾರಣಗಳೇ ಸಿಗುತ್ತಿಲ್ಲ. ಬಿಜೆಪಿಯವರು ಮೋದಿ ಹೆಸರಿನಲ್ಲಿ ನಡೆಸಿದ ಪ್ರಚಾರ ಸೋಲಿಗೆ ಕಾರಣವಾಗಿರಬಹುದು ಎಂಬುದು ಕಾಂಗ್ರೆಸ್‌ ಮುಖಂಡರ ಸಮರ್ಥನೆಯಾಗಿದೆ. ಏನೇ ಆದರೂ, ಲೋಕಸಭೆ ಚುನಾವಣೆಯ ಸೋಲಿಗೆ ಸ್ಥಳೀಯ ಸಂಸ್ಥೆಗಳ ಗೆಲುವು ಕಾಂಗ್ರೆಸ್‌ ಮುಖಂಡರಿಗೆ ಒಂದಷ್ಟು ಸಮಾಧಾನ ಮೂಡಿಸಿದೆ.

ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ 2.43 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದ ಕಾಂಗ್ರೆಸ್‌ ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದು ಹೇಗೆ ಎಂಬುದಕ್ಕೆ ಕಾರಣಗಳೇನು ತಿಳಿಯುತ್ತಿಲ್ಲ. ಇದೀಗ ಹಡಗಲಿ, ಹರಪನಹಳ್ಳಿ, ಸಂಡೂರು ಪುರಸಭೆ, ಕಮಲಾಪುರ ಪಪಂನಲ್ಲಿ ಕಾಂಗ್ರೆಸ್‌ಗೆ ಬಹುಮತ ಲಭಿಸಿದ್ದು, ಜಿಲ್ಲೆಯ ತಳಮಟ್ಟದಲ್ಲಿ ಕಾಂಗ್ರೆಸ್‌ ಭದ್ರವಾಗಿದೆ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್‌ ನೀಡಿರುವ ಕಾರ್ಯಕ್ರಮಗಳೇ ಈ ಫಲಿತಾಂಶಕ್ಕೆ ಕಾರಣ. ಬಿಜೆಪಿಯವರಂತೆ ಮೋದಿಯವರನ್ನೇ ಮಾರ್ಕೆಟಿಂಗ್‌ ಮಾಡುವುದಿಲ್ಲ.
ಬಿ.ವಿ.ಶಿವಯೋಗಿ
ಜಿಲ್ಲಾಧ್ಯಕ್ಷರು, ಕಾಂಗ್ರೆಸ್‌ ಪಕ್ಷ, ಬಳ್ಳಾರಿ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next